ಮಂಗಳೂರು:ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಸಂಪೂರ್ಣ ಹದಗೆಟ್ಟು ಹೋಗಿದೆ. ಸಿಕ್ಕಿದಲ್ಲಿ ಅಗೆಯುವುದು ಕಾಣುತ್ತದೆ ಹೊರತು ಯಾವುದೇ ಸ್ಮಾರ್ಟ್ನೆಸ್ ಕಾಣುತ್ತಿಲ್ಲ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನಗರದ ಮನಪಾ ಮುಂಭಾಗ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಇದೀಗ ಉಚ್ಚ ನ್ಯಾಯಾಲಯ ಸ್ಮಾರ್ಟ್ ಸಿಟಿ ಕಾಮಗಾರಿಗೆ ತಡೆಯಾಜ್ಞೆ ನೀಡಿದೆ. ಇದು ಅಸಮರ್ಥತೆಯ ಉತೃಷ್ಟತೆ ಎಂದರೆ ತಪ್ಪಾಗಲಾರದು. ಇದರಲ್ಲಿ ಯಾವ ರೀತಿಯ ಅವ್ಯವಹಾರಗಳು ನಡೆಯುತ್ತಿವೆ ಎಂಬುದು ಜನತೆಗೆ ತಿಳಿಯಬೇಕು ಎಂದು ಹೇಳಿದರು.
ಮಂಗಳೂರಿನಲ್ಲಿ ಮೀನುಗಾರಿಕೆ, ಬಂದರು, ಪ್ರವಾಸೋದ್ಯಮಗಳಿಗೆ ವಿಫುಲ ಅವಕಾಶಗಳಿವೆ. ಇದು ಯಾವುದಕ್ಕೂ ಸ್ಮಾರ್ಟ್ ಸಿಟಿಯಲ್ಲಿ ಒತ್ತು ನೀಡಿಲ್ಲ. ಪ್ರವಾಸೋದ್ಯಮ, ಐಟಿ ಅಭಿವೃದ್ಧಿ ಆದಲ್ಲಿ ಯುವ ಜನತೆಗೆ ಕೆಲಸ ದೊರೆಯುತ್ತದೆ. ಇಂದು ಸ್ಮಾರ್ಟ್ ಸಿಟಿ ರಸ್ತೆ ಫುಟ್ಪಾತ್ಗಳನ್ನು ಅಗೆಯೋದು, ಕಟ್ಟೋದಕ್ಕೆ ಮಾತ್ರ ಸೀಮಿತವಾಗಿದೆ. ಮನಪಾ ಮಾಡುವ ಕೆಲಸವನ್ನು ಮಾಡಿ ಅವ್ಯವಹಾರಗಳನ್ನು ಮಾಡಲಾಗುತ್ತಿದೆ. ಬಿಜೆಪಿಗರಲ್ಲಿ ದೂರದೃಷ್ಟಿಕೋನದ ಕೊರತೆಯಿದೆ ಎಂದು ವ್ಯಂಗ್ಯವಾಡಿದರು.
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸಾಕಷ್ಟು ಅನುದಾನ ಮಂಗಳೂರಿಗೆ ಬಂದಿದೆ. ನಾವು ಬುದ್ಧಿವಂತರಾಗಿ ಬಂದಿರುವ ಅನುದಾನವನ್ನು ಸರಿಯಾಗಿ ಉಪಯೋಗಿಸಬೇಕಿದೆ. ನಮ್ಮ ನಮ್ಮ ಕಿಸೆ ತುಂಬಿಸಿಕೊಳ್ಳಲು ಅವ್ಯವಹಾರ ನಡೆಸೋದು ಬೇಡ. ಕೆಲವೊಂದು ಕನ್ಸಲ್ಟೆನ್ಸಿಗಳು ಜನರನ್ನು, ಜನಪ್ರತಿನಿಧಿಗಳನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಬಿಜೆಪಿಗರೇ ಮೇಕೆಯ ಮುಖವಾಡ ಹೊತ್ತಿರುವ ತೋಳಗಳಂಥಹ ಕನ್ಸಲ್ಟೆನ್ಸಿಗಳನ್ನು ನಂಬಿ ಮೋಸ ಹೋಗದಿರಿ. ಜನರು ನಿಮ್ಮತ್ತ ನೋಡುತ್ತಿದ್ದಾರೆ, ನೀವು ತಲೆ ಉಪಯೋಗಿಸಿ ಕೆಲಸ ಮಾಡಿ. ಆದ್ದರಿಂದ ಎಲ್ಲರೂ ಒಂದಾಗಿ ನಮ್ಮ ನಗರವನ್ನು ಉಳಿಸುವ ಪ್ರಯತ್ನ ಆಗಬೇಕು. ಕಾಂಗ್ರೆಸ್ ಇದನ್ನು ಖಂಡಿಸುತ್ತದೆ. ಆದ್ದರಿಂದ ಈಗಲಾದರೂ ಎಚ್ಚೆತ್ತು ಸರಿಯಾದ ರೀತಿಯಲ್ಲಿ ಸ್ಮಾರ್ಟ್ ಸಿಟಿ ಅನುದಾನವನ್ನು ಅನುಷ್ಠಾನಗೊಳಿಸಿ. ಇಲ್ಲದಿದ್ದರೆ ಕಾಂಗ್ರೆಸ್ ಪ್ರತಿಭಟನೆಯನ್ನು ಎದುರಿಸಲು ಸಿದ್ಧರಾಗಿರಿ ಎಂದು ಜೆ.ಆರ್.ಲೋಬೊ ಆಗ್ರಹಿಸಿದರು.
ಇನ್ನು ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಪಾರದರ್ಶಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅಧಿಕಾರದಲ್ಲಿರುವವರನ್ನು ದಾರಿ ತಪ್ಪಿಸುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ಸಿಟಿ ಅವ್ಯವಹಾರ ಬೆಳಕಿಗೆ ಬಂದು ಅದು ತನಿಖೆಯಾಗಿ ತೊಂದರೆಯಾದಲ್ಲಿ ಚುನಾಯಿತ ಜನಪ್ರತಿನಿಧಿಗಳು ಸಿಕ್ಕಿಬೀಳಲ್ಲ. ಅಧಿಕಾರಿಗಳು ತೊಂದರೆಗೆ ಸಿಲುಕಲಿದ್ದಾರೆ. ಅದಕ್ಕಾಗಿ ಬಹಳಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.