ಪುತ್ತೂರು (ದಕ್ಷಿಣ ಕನ್ನಡ) : ಬಿಜೆಪಿ ಮುಖಂಡರ ಅವಹೇಳನಕಾರಿ ಬ್ಯಾನರ್ ಅಳವಡಿಕೆ ಪ್ರಕರಣದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ ಹಿಂದೂ ಕಾರ್ಯಕರ್ತನನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭೇಟಿ ಮಾಡಿದ್ದಾರೆ. ಈ ವಿಚಾರವಾಗಿ ಖುದ್ದು ಸ್ವತಃ ಪುತ್ತೂರಿಗೆ ಬಂದ ಬಸನಗೌಡ ಪಾಟೀಲ್ ಯತ್ನಾಳ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತನನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ.
ಬಳಿಕ ಆಸ್ಪತ್ರೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಈ ಘಟನೆಯ ಬಗ್ಗೆ ವಾಸ್ತವಿಕ ತನಿಖೆಯಾಗಬೇಕು. ಪೊಲೀಸರಿಂದ ಹಲ್ಲೆಗೊಳಗಾಗಿರುವ ನಮ್ಮ ಕಾರ್ಯಕರ್ತರು ತಾಲಿಬಾನಿಗಳಲ್ಲ, ಯಾವುದೇ ದೇಶ ವಿರೋದಿ ಚಟುವಟಿಕೆ ಮಾಡಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಯಾವುದೇ ದೂರು ಬಂದರು ಮೊದಲು ಅದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಪೊಲೀಸರು ದೌರ್ಜನ್ಯ ದಿಂದ ಪೊಲೀಸ್ ಇಲಾಖೆಗೆ ಗೌರವ ತರುವಂತದ್ದಲ್ಲ ಎಂದು ಹೇಳಿದರು.
ಇದನ್ನೂ ಓದಿ :ಕಟೀಲ್, ಡಿವಿಎಸ್ ಭಾವಚಿತ್ರಕ್ಕೆ ಅವಮಾನ: ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯದ ಸತ್ಯಾಸತ್ಯತೆ ಪರಿಶೀಲನೆ- ಎಸ್ಪಿ
ಡಿಎಸ್ಪಿ ಈಗಾಗಲೇ ಅಧಿಕಾರಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಕೂಡಲೆ ಡಿಎಸ್ಪಿ ಅವರನ್ನು ಸಸ್ಪೆಂಡ್ ಮಾಡಬೇಕು. ಯಾರೋ ಒತ್ತಡ ಹಾಕಿದ್ದಾರೆ ಎಂದು ಊಹಾಪೋಹಗಳನ್ನು ಮಾಡಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೋಲೀಸರು ಕಾನೂನು ಪ್ರಕಾರ ಕೆಲಸ ಮಾಡಲಿ. ನಾಳೆ ಕಾಂಗ್ರೆಸ್ನವರು ಕೊಲೆ ಮಾಡಿ ಎಂದರೆ ಪೋಲೀಸರು ಕೊಲೆ ಮಾಡುತ್ತಾರೆಯೇ ? ಕಾಂಗ್ರೆಸ್ ಸರಕಾರ ಬಂದ ಬಳಿಕ ಕೆಲವು ಪೊಲೀಸ್ ಅಧಿಕಾರಿಗಳು ಈ ರೀತಿ ನಡೆದುಕೊಳ್ಳಲು ಆರಂಭಿಸಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.