ಮಂಗಳೂರು: ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಅಧೀನದಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಸೈನ್ಸ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳು ನಡೆಯುತ್ತಿದ್ದು, ಅದರ ವಲಯ ಕಚೇರಿಯನ್ನು ಮಂಗಳೂರಿನಲ್ಲಿ ಶೀಘ್ರದಲ್ಲೇ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಪ್ರತಿಯೊಂದಕ್ಕೂ ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಮಸ್ಯೆ ನೀಗಿಸಲೆಂದೇ ವಲಯ ಕಚೇರಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ:
ಭವಿಷ್ಯದಲ್ಲಿ ಪರಿಸರ ಸ್ನೇಹಿ ವಾಹನಗಳು ಬರುತ್ತಿರುವ ಸೂಚನೆ ಸ್ಪಷ್ಟವಾಗಿದ್ದು, ಈ ಸಂಬಂಧ ವಿದ್ಯುತ್ ಚಾಲಿತ ಕಾರು, ಆಟೋ, ಬೈಕ್ಗಳಿಗೆ ಉತ್ತೇಜನ ನೀಡಲಾಗುವುದು. ಅಲ್ಲದೇ, ವಿದ್ಯುತ್ ಚಾಲಿತ ಕಾರು ಪಾರ್ಕಿಂಗ್ ಹಾಗೂ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗುವುದು. ವಿದ್ಯುತ್ ಚಾಲಿತ ವಾಹನಗಳು ಒಮ್ಮೆ ಚಾರ್ಜ್ ಆದರೆ 140 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿರುತ್ತವೆ. ಆದ್ದರಿಂದ 6 ಕಿ.ಮೀ.ವ್ಯಾಪ್ತಿಯಲ್ಲಿ ಪಾರ್ಕಿಂಗ್ ಹಾಗೂ ಚಾರ್ಜಿಂಗ್ ವ್ಯವಸ್ಥೆ ಮಾಡಿ ನಿರ್ಮಿಸಲಾಗುವುದು ಎಂದು ಹೇಳಿದರು.