ಶಿರಸಿ: ಪರಿಸರ ಹಾಗೂ ತೋಟಗಾರಿಕಾ ಕಾಲೇಜುಗಳು ಜಿಲ್ಲೆಯಲ್ಲಿರುವ ಕಾರಣ ಎರಡನ್ನೂ ಸಂಯೋಜಿಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪರಿಸರ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಹಾಗೂ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಜೀವ ಪರಿಸರ ವಿಶ್ವವಿದ್ಯಾಲಯವನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿರಸಿಯಲ್ಲಿ ಸ್ಥಾಪನೆ ಮಾಡಲಿದ್ದೇವೆ. ಈ ವಿಶ್ವವಿದ್ಯಾಲಯದ ಜತೆಗೆ ಸಾಂಪ್ರದಾಯಿಕ ಶಿಕ್ಷಣವಾದ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಕೂಡ ಇರಲಿದೆ. ಈ ಕಾಂಪೋಸಿಟ್ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ನೀಡಲಾಗುವುದು ಎಂದು ಹೇಳಿದರು.
ಅರಣ್ಯವಾಸಿಗಳಿಗೆ ಅಭಯ: ಇಡೀ ದೇಶದ ಎಲ್ಲಾ ರಾಜ್ಯಗಳು ಅರಣ್ಯ ಹಕ್ಕಿನ ಸಮಸ್ಯೆ ಎದುರಿಸುತ್ತಿವೆ. ಈ ಕುರಿತ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿದೆ. ಕೇಂದ್ರ ಸರ್ಕಾರ ಕೂಡ ಈ ವಿಚಾರದ ಬಗ್ಗೆ ನಮ್ಮನ್ನು ಕೇಳಿದ್ದು, ಮೂರು ತಲೆಮಾರಿನ ಬದಲು ಒಂದು ತಲೆಮಾರಿನ ಆಧಾರ ಪರಿಗಣಿಸಿ ಅವರನ್ನು ಅರಣ್ಯವಾಸಿಗಳೆಂದು ಹಕ್ಕು ಪತ್ರ ವಿತರಿಸಬೇಕು ಅಂತಾ ರಾಜ್ಯದ ಸ್ಪಷ್ಟ ಅಭಿಪ್ರಾಯವನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ. ಅದು ಕೇಂದ್ರದಿಂದ ಸುಪ್ರೀಂ ಕೋರ್ಟ್ಗೆ ಮಂಡನೆಯಾಗಲಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಅರಣ್ಯವಾಸಿಗಳಿದ್ದಾರೋ ಅವರನ್ನು ಯಾವ ಕಾರಣಕ್ಕೂ ನಮ್ಮ ರಾಜ್ಯ ಸರ್ಕಾರ ಒಕ್ಕಲೆಬ್ಬಿಸಲ್ಲ. ಈಗಾಗಲೇ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದು, ಸುಪ್ರೀಂ ತೀರ್ಪಿನವರೆಗೂ ಅಧಿಕಾರಿಗಳು ಕೂಡ ಅರಣ್ಯವಾಸಿಗಳಿಗೆ ತೊಂದರೆ ನೀಡದಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಕಳಸ ಬಂಡೂರಿ ಕಾಮಗಾರಿ ನಡೆಸುತ್ತೇವೆ: ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಗೋವಾದವರು ಎಲ್ಲಿಗೆ ಬೇಕಾದರೂ ಹೋಗಲಿ. ನಾವು ಸುಪ್ರೀಂ ಕೋರ್ಟ್ ನಿರ್ದೇಶಿತ ಪೀಠದ ವರದಿಯಂತೆ ಕಾಮಗಾರಿಗಳನ್ನ ನಡೆಸುತ್ತೇವೆ. ಗೋವಾದವರು ಈಗಾಗಲೇ ಸುಪ್ರೀಂ ಕೋರ್ಟಗೆ ಹೋಗಿ ವಾಪಸ್ ಬಂದಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶಿತ ಪೀಠ ರಚನೆಯಾಗಿ, ಅದರ ವರದಿಯ ಆಧಾರದಲ್ಲಿ ನೋಟಿಫಿಕೇಶನ್ ಮಾಡಲಾಗಿದೆ. ಡಿಪಿಆರ್ ಒಪ್ಪಿಗೆ ನೀಡಿದೆ. ಹೀಗಾಗಿ, ಸುಪ್ರೀಂ ಕೋರ್ಟ್ನ ಆದೇಶ ಹಾಗೂ ಪೀಠದ ವರದಿಯಂತೆ ಕಾಮಗಾರಿಗಳನ್ನು ನಡೆಸಲಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ:'ಮೀಸಲಾತಿಯಲ್ಲಿ ಗೊಂದಲವಿಲ್ಲ': ಮಹದಾಯಿ ಕಾಮಗಾರಿ ಆರಂಭದ ಬಗ್ಗೆ ಬೊಮ್ಮಾಯಿ ಭರವಸೆ