ಬಂಟ್ವಾಳ: ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಬೀಡಿ ಕಾರ್ಮಿಕರಿಗೆ ಕನಿಷ್ಠ ತಲಾ 10 ಸಾವಿರ ರೂ.ಗಳ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರ ಮೂಲಕ ಸಿಎಂಗೆ ಮನವಿ ಮಾಡಿದೆ.
ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ಬೀಡಿ ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿರುವ ಸುಮಾರು 4 ಲಕ್ಷ ಬೀಡಿ ಕಾರ್ಮಿಕರ ಕುಟುಂಬದ ಬದುಕು ದುಸ್ಥರವಾಗಿದೆ. ಪ್ರಸ್ತುತ ಸರ್ಕಾರವು ಪಡಿತರದ ಮೂಲಕ ಅಕ್ಕಿ, ಬೇಳೆ, ಗೋಧಿಯನ್ನು ನೀಡಿದರೂ, ಇತರ
ವಸ್ತುಗಳ ಬೆಲೆ ದುಬಾರಿಯಾಗಿದೆ ಎಂದು ಸಮಾನ ಮನಸ್ಕ ಸಂಘಟನೆಗಳು ಹೇಳಿವೆ.
ಈ ಕುರಿತು ತಹಸೀಲ್ದಾರ್ ಅವರಿಗೆ ಮನವಿ ನೀಡಿರುವ ಸಂಘಟನೆಗಳು, ಲಾಕ್ಡೌನ್ ಸಡಿಲಿಕೆಯ ಬಳಿಕ ಮಾಲೀಕರು ಸರಿಯಾದ ಕೆಲಸ ನೀಡುತ್ತಿಲ್ಲ. ಜತೆಗೆ ಏ. 1ರಿಂದ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಸಿಗಬೇಕಾದ ತುಟ್ಟಿ ಭತ್ಯೆಯನ್ನೂ ಜಾರಿ ಮಾಡಿಲ್ಲ. ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ನೀಡಿರುವ ಪರಿಹಾರದಲ್ಲಿ ಬೀಡಿ ಕಾರ್ಮಿಕರ ವಿಚಾರವನ್ನೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಸರಕಾರ ತತ್ಕ್ಷಣ ತಲಾ 10 ಸಾವಿರ ರೂ.ಗಳ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ವರ್ಷದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಗಳ ಮಂಜೂರು ಆದೇಶ ನೀಡಿದರೂ, ಕೇವಲ 2 ಲಕ್ಷ ರೂ. ಮಾತ್ರ ಸರ್ಕಾರದಿಂದ ಪಾವತಿಯಾಗಿದೆ. ಉಳಿದ 3 ಲಕ್ಷ ರೂ.ಗಳನ್ನು ಸರ್ಕಾರ ತತ್ಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಸಮಿತಿಯ ಸಂಚಾಲಕರಾದ ಬಿ.ಶೇಖರ್, ಪ್ರಭಾಕರ ದೈವಗುಡ್ಡೆ, ರಾಮಣ್ಣ ವಿಟ್ಲ, ರಾಜಾ ಚಂಡ್ತಿಮಾರ್, ಹರೀಶ್ ಅಜ್ಜಿಬೆಟ್ಟು, ವಿವಿಧ ಸಂಘಟನೆಗಳ ಪ್ರಮುಖರಾದ ಲೋಕೇಶ್ ಸುವರ್ಣ, ಹಾರೂನ್ ರಶೀದ್ ಇತರರು ಇದ್ದರು.