ಮಂಗಳೂರು:ರಾಜ್ಯ ಸರ್ಕಾರದ ಬಜೆಟ್ ಮೂಲಕ ನಮ್ಮ ಜನಪ್ರತಿನಿಧಿಗಳು ಕೂಡಾ ಕರಾವಳಿಗೆ ಮಾರಕವಾದ ಎತ್ತಿನಹೊಳೆ ಯೋಜನೆಯ ಪರವಾಗಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಆರೋಪಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅವರದ್ದೇ ಆಗಿರುವಾಗ ಬಜೆಟ್ನಲ್ಲಿ ಎತ್ತಿನಹೊಳೆಗೆ ಅನುಮೋದನೆ ನೀಡುವಾಗಲೂ ನಮ್ಮ ಸಂಸದರು ಸುಮ್ಮನಿದ್ದಾರೆಂದರೆ ಜನಪ್ರತಿನಿಧಿಗಳೂ ಕೂಡಾ ಇಲ್ಲೊಂದು ನಾಟಕ, ಅಲ್ಲೊಂದು ನಾಟಕ ಮಾಡುತ್ತಿದ್ದಾರೆಂದು ಕಂಡುಬರುತ್ತಿದೆ. ಈ ಮೂಲಕ ಕಾಡುವ ಪ್ರಶ್ನೆಯೆಂದರೆ ಬಜೆಟ್ ಮೂಲಕ ಬರುವ ಹಣದಲ್ಲಿ ಇವರೂ ಕೂಡ ಪಾಲುದಾರರೇ?, ಷೇರುದಾರರೇ? ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ಬಜೆಟ್ನಲ್ಲಿ ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ. ಮೀಸಲಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರವೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಇನ್ನೊಂದು ಕಡೆ ಎತ್ತಿನಹೊಳೆ ಯೋಜನೆ ಮಾಡುತ್ತಿದೆ ಎಂದರೆ ಇದರ ಮೂಲಕ ಯಾವುದೋ ಒಂದು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ ಎಂದು ಕಂಡುಬರುತ್ತಿದೆ ಎಂದಿದ್ದಾರೆ.
ಈ ಬಜೆಟ್ನಲ್ಲಿ 1,500 ಕೋಟಿ ಹಣವನ್ನು ಎತ್ತಿನಹೊಳೆಗೆ ಇಡಲಾಗಿದೆ ಎಂದರೆ ಇದು ಪಕ್ಕಾ ದುಡ್ಡಿನ ಹೊಳೆ. ಎತ್ತಿನಹೊಳೆ ಎಂದರೆ ರಾಜಕಾರಣಿಗಳಿಗೆ, ಗುತ್ತಿಗೆದಾರರಿಗೆ ಎಟಿಎಂ ಇದ್ದ ಹಾಗೆ. ಆದರೆ ಈ ಬಗ್ಗೆ ಜನರು ಧ್ವನಿ ಎತ್ತುತ್ತಿಲ್ಲ. ಕಳೆದ ಬಾರಿ ಸಾಕಷ್ಟು ಮಳೆಯಾಯಿತು, ಭೂ ಕುಸಿತ, ಜಲಪ್ರವಾಹ, ಬರ ಎಲ್ಲವೂ ದ.ಕ ಜಿಲ್ಲೆಯಲ್ಲಿ ನಡೆಯುತ್ತಿದೆ. ಆದ್ದರಿಂದ ನೇತ್ರಾವತಿಯ ನದಿ ಮೂಲವೇ ಪಶ್ಚಿಮಘಟ್ಟದಲ್ಲಿ ಬರಿದಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.