ಸುಳ್ಯ(ದಕ್ಷಿಣ ಕನ್ನಡ): ಕೇರಳದ ಗಡಿ ಪ್ರದೇಶವಾದ ಬದಿಯಡ್ಕದ ಎಲಿಜಬೆತ್ ವರ್ಗೀಸ್ಗೆ ಅಮೆರಿಕದಿಂದ 2.5 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ. ಅಮೆರಿಕದ ಸ್ಟಿಲ್ವಾಟರ್ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿಯಿಂದ 5 ವರ್ಷಗಳ ಸಂಶೋಧನೆಗಾಗಿ ಬದಿಯಡ್ಕದ ಚುಳ್ಳಿಕಾನ ನಿವಾಸಿ ಎಲಿಜಬೆತ್ ಅವರಿಗೆ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸಂಶೋಧನೆ ನಡೆಸುವುದಕ್ಕಾಗಿ ಈ 2.5 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ.
ಎಲಿಜಬೆತ್ ಅವರು ಚೆನ್ನೈನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರಜ್ಞರಾಗಿದ್ದಾರೆ. ಎಲಿಜಬೆತ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಗೋರಕ್‌ಪುರದಲ್ಲಿ ಪಡೆದಿದ್ದಾರೆ. ಇವರು ಭಾಷಣ ಕಲೆಯಲ್ಲಿ ಮತ್ತು ಬರವಣಿಗೆಯಲ್ಲಿ ನೈಪುಣ್ಯತೆ ಪಡೆದಿದ್ದು, ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಹಿರಿಮೆ ಹೊಂದಿದ್ದಾರೆ. ಎಲಿಜಬೆತ್ ಅವರು ಮದ್ರಾಸ್ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಮತ್ತು ಪೂಕೋಡ್‌ನ ವೆಟರ್ನರಿ ಕಾಲೇಜಿನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಎಲಿಜಬೆತ್, ಶಿಕ್ಷಕರಾದ ವರ್ಗೀಸ್ ವೀರಾಲಾಶೇರಿಯಿಲ್ ಮತ್ತು ತೆರೇಸಾ ತುನಿಯಾಂಬ್ರೈಲ್ ಅವರ ಪುತ್ರಿಯಾಗಿದ್ದಾರೆ. ಎಲಿಜಬೆತ್ ಅವರ ತಂದೆ ಪತ್ರಿಕೋದ್ಯಮ ಸೇರಿದಂತೆ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಲಿಜಬೆತ್ ಅವರ ಅಕ್ಕ ರೆಜಿನಾ ಮೇರಿ ವರ್ಗೀಸ್ ಅವರು ಇಂಡಿಯನ್ ಸಿವಿಲ್ ಸರ್ವಿಸ್‌ನಲ್ಲಿ 49ನೇ ರಾಂಕ್ ಪಡೆದು ಐಎಫ್‌ಎಸ್ ವಿದ್ಯಾರ್ಥಿನಿಯಾಗಿದ್ದಾರೆ. ಇವರ ಅಣ್ಣ ರೋಹಿತ್ ಆ್ಯಂಟನಿ ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಜಿಆರ್‌ಇ ಪರೀಕ್ಷೆ ಬರೆದು ಎಲಿಜಬೆತ್ ಅವರು ಅಮೆರಿಕದ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿಗೆ ಆಯ್ಕೆಯಾಗಿದ್ದು, ಆಗಸ್ಟ್ 11ರಂದು ಅಮೆರಿಕಕ್ಕೆ ತೆರಳಿದ್ದಾರೆ.