ಸುಳ್ಯ:ಒಂಟಿ ಸಲಗವೊಂದು ಬೆಳಗ್ಗೆಯಿಂದ ಸಂಜೆಯವರೆಗೆ ಕೋಡಿಂಬಾಳ ಸಮೀಪದ ಪುಳಿಕುಕ್ಕು ಕಾಡಿನಲ್ಲಿ ಬೀಡು ಬಿಟ್ಟಿದ್ದು, ಇದೀಗ ಕಡಬ ಮೂಲಕ ಇಚ್ಲಂಪಾಡಿ ಕಡೆಗೆ ಪ್ರಯಾಣ ಬೆಳೆಸಿದೆ.
ಸುಳ್ಯ ತಾಲೂಕಿನ ಪಂಬೆತ್ತಾಡಿ ಕಾಡಿನಿಂದ ಸೋಮವಾರ ರಾತ್ರಿ ಕಡಬ ಕಡೆಗೆ ಹೊರಟಿದ್ದ ಕಾಡಾನೆಯು ಕರಿಕಳ, ಪಂಜ ಮಾರ್ಗವಾಗಿ ಪುಳಿಕುಕ್ಕು ಅರಣ್ಯ ಪ್ರದೇಶಕ್ಕೆ ತಲುಪಿತ್ತು. ಹಗಲು ಸಮಯದಲ್ಲಿ ಈ ಪ್ರದೇಶದಲ್ಲಿ ವಿಶ್ರಾಂತಿ ಪಡೆದ ಸಲಗ ಇದೀಗ ಕಡಬ ಮೂಲಕ ಇಚ್ಲಂಪಾಡಿ ಕಡೆಗೆ ಪ್ರಯಾಣ ಬೆಳೆಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನೆಯು ಪ್ರತೀ ವರ್ಷ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಯಾರಿಗೂ ಯಾವುದೇ ತೊಂದರೆ ನೀಡುವುದಿಲ್ಲ. ಆನೆಯು ಅದರಷ್ಟಕ್ಕೆ ಸಂಚರಿಸುತ್ತದೆ. ಈ ಹಿಂದಿನ ವರ್ಷವೂ ಕೂಡಾ ಪುಳಿಕುಕ್ಕು ಕಾಡಿನಲ್ಲಿ ಒಂದು ದಿನ ಬೀಡು ಬಿಟ್ಟಿತ್ತು. ಹಗಲು ಹೊತ್ತಿನಲ್ಲಿ ಈ ಆನೆಯು ಸಂಚರಿಸುವ ಸಾಧ್ಯತೆ ಕಡಿಮೆ. ಆನೆಯ ಚಲನ ವಲನಗಳನ್ನು ಅರಣ್ಯ ಇಲಾಖೆ ಗಮನಿಸಲಾಗುತ್ತಿದ್ದು, ಆನೆಗೆ ಸಂಚಾರ ಪಥವನ್ನು ಕ್ಲಿಯರ್ ಮಾಡಿ ಕೊಡಲಾಗುತ್ತಿದೆ.