ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳೂರು : ಶಾಲಾ ಮಕ್ಕಳ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದ. ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗ ಇರುವ ವ್ಯವಸ್ಥೆಯಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆಯಾಗುತ್ತಿದೆ. ಇದನ್ನು ಕಡಿತ ಮಾಡಲು ಪ್ರಯತ್ನಿಸಲಾಗುತ್ತಿದೆ. ಈಗ ಇರುವ ಭಾರಕ್ಕಿಂತ ಅರ್ಧಕ್ಕೂ ಕಡಿಮೆ ಭಾರ ಇರುವಂತೆ ವ್ಯವಸ್ಥೆ ಮಾಡಲಾಗುವುದು. ನನ್ನ ಬಯಕೆ ಆರನೇ ಒಂದು ಪಟ್ಟು ಭಾರ ಇರುವಂತೆ ಮಾಡಬೇಕೆಂಬುದು ಇತ್ತು. ಆದರೆ ಮೂರನೇ ಒಂದು ಪಟ್ಟು ಇರುವಂತೆ ಮಾಡಲಾಗುವುದು. ಬ್ಯಾಗ್ ಹೊರೆ ಕಡಿಮೆ ಮಾಡುವ ತೀರ್ಮಾನದಿಂದ ಶಿಕ್ಷಣದ ಗುಣಮಟ್ಟಕ್ಕೆ ತೊಂದರೆಯಾಗುವುದಿಲ್ಲ ಎಂದರು.
ಇನ್ನು ಎಸ್ಎಸ್ಎಲ್ಸಿಗೆ ಮೂರು ಬಾರಿ ಎಕ್ಸಾಂ ಮಾಡಲು ನಿರ್ಧರಿಸಲಾಗಿದೆ. ಮೊದಲ ಬಾರಿಗೆ ನಡೆದ ಪರೀಕ್ಷೆಯಲ್ಲಿ ಫೇಲಾದ ಅಥವಾ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಬೇಕಾದ ಸಬ್ಜೆಕ್ಟ್ನಲ್ಲಿ ಎರಡನೇ ಪರೀಕ್ಷೆ ತೆಗೆದುಕೊಳ್ಳಬಹುದು. ಅದರಲ್ಲಿಯೂ ತೃಪ್ತರಾಗದಿದ್ದರೆ ಮೂರನೇ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಮೂರರಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಪರಿಗಣಿಸಲಾಗುವುದು. ಇದರಿಂದ ಅವರಿಗೆ ಅದೇ ವರ್ಷದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಿಂದ ಆ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಅಡ್ಮಿಷನ್ ಪಡೆದು ಶಾಲೆಗೆ ಹೋಗಲು ಒಂದು ತಿಂಗಳು ವಿಳಂಬವಾಗಬಹುದು. ಅದನ್ನು ಆಯಾ ಶಿಕ್ಷಣ ಸಂಸ್ಥೆಗಳು ಬ್ರಿಡ್ಜ್ ಕೋರ್ಸ್ನಿಂದ ಅದನ್ನು ಸರಿದೂಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜ್ಯದಲ್ಲಿ 1600 ಅನಧಿಕೃತ ಶಾಲೆಗಳು: ರಾಜ್ಯದಲ್ಲಿ 1600 ಅನಧಿಕೃತ ಶಾಲೆಗಳು ಇವೆ. ದಾಖಲೆಗಳು ಸರಿಯಿಲ್ಲದೆ ಇರುವ ಈ ಶಾಲೆಗಳನ್ನು ಮುಚ್ಚಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಬಹುದು. ಇದಕ್ಕಾಗಿ ಅವರಿಗೆ ದಾಖಲೆಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಮುಂದಿನ ವರ್ಷದಲ್ಲಿ ಅಡ್ಮಿಷನ್ ವೇಳೆಯೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇನ್ನು ರಾಜ್ಯದಲ್ಲಿ ಮುಂದಿನ ವರ್ಷ ಹೊಸ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರಾರಂಭಿಸಲಾಗುವುದು. ಈ ಶಾಲೆಯಲ್ಲಿ 1500 ಮಕ್ಕಳು ಕಲಿಯಲಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮವನ್ನು ಕಲಿಸಿ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುವುದು. ಬಡವರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ನೆಲೆಯಲ್ಲಿ ಇದನ್ನು ಆರಂಭಿಸಲಾಗುತ್ತಿದೆ. ಮುಂದಿನ ವರ್ಷ ಪ್ರತಿ ವಿಧಾನಸಭೆಯಲ್ಲೂ 3 ಶಾಲೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಜೆಡಿಎಸ್ ನ ಎಸ್ ಹೋಗಿದೆ :ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ನ ಎಸ್ ಹೋಗಿದೆ. ಜೆಡಿಎಸ್ ನವರು ಯಾರಿಗೆ ಹಿಗ್ಗಾ ಮುಗ್ಗಾ ಬೈಯುತ್ತಿದ್ದರೋ ಅವರನ್ನೆ ಅಪ್ಪಿಕೊಂಡಿದ್ದಾರೆ. ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಜೆಡಿಎಸ್ ತೊರೆದು ಹಲವು ಮಂದಿ ಕಾಂಗ್ರೆಸ್ ಸೇರಲಿದ್ದಾರೆ. ಒಂದು ಸಿದ್ಧಾಂತವನ್ನು ಅಪ್ಪಿಕೊಂಡಿದ್ದ ಈ ನಾಯಕರು ಆ ಸಿದ್ಧಾಂತಕ್ಕೆ ಧಕ್ಕೆ ಬಂದಾಗ ತಮ್ಮ ನಿರ್ಧಾರವನ್ನು ತೆಗದುಕೊಳ್ಳಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೂಡ ಹಲವರು ಕಾಂಗ್ರೆಸ್ ಸೇರಲಿದ್ದಾರೆ ಎಂದರು.
ಪ್ರಣಾವನಂದ ಸ್ವಾಮೀಜಿ ಬಗ್ಗೆ ಟೀಕೆ: ಪ್ರಣಾವನಂದ ಸ್ವಾಮೀಜಿ ವಿಚಾರ ಮಾತನಾಡುವಾಗ ಮಧು ಬಂಗಾರಪ್ಪ, ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದರು. ಅವರು ಸುಮ್ಮನೆ ಬುರುಡೆ ಬಿಡ್ತಾ ಇದ್ದಾರೆ. ಆತ ಎಲ್ಲಿಂದ ಬಂದ, ಏನು ಮಾಡುತ್ತಿದ್ದ ಎಂಬುದನ್ನು ತಿಳಿಯಿರಿ. ಆತನ ಹಿಸ್ಟರಿ ಸ್ವಲ್ಪ ನೋಡಿ. ನಾನು ಅವನನ್ನು ಒಪ್ಪುವುದಿಲ್ಲ. ನಾನು ಯಾವುದೇ ಸ್ವಾಮೀಜಿಯನ್ನು ನನ್ನ ರಾಜಕೀಯ ಜೀವನದಲ್ಲಿ ಬಳಸಿಕೊಂಡಿಲ್ಲ ಎಂದು ಹೇಳಿದರು.
ದ. ಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಸಂಬಂಧ ನನ್ನನ್ನು ಉಸ್ತುವಾರಿ ಮಾಡಿ ವರದಿ ನೀಡಲು ತಿಳಿಸಿದ್ದಾರೆ. ಇಂದಿನಿಂದ 15 ದಿನಗಳಲ್ಲಿ ಜಿಲ್ಲೆಯ ನಾಯಕರ, ಸಂಘಸಂಸ್ಥೆಗಳ, ಮುಖಂಡರುಗಳ ಅಭಿಪ್ರಾಯ ಪಡೆದು ವರದಿ ನೀಡಲಾಗುವುದು. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಸವಾಲು ನಮ್ಮ ಮುಂದೆ ಇದೆ. ಈ ಬಾರಿ 100 ಶೇಕಡಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ಹಿಂದೆ ಕಾಂಗ್ರೆಸ್ ಗೆಲುವು ಕಾಣುತ್ತಿದ್ದ ಸ್ಥಿತಿಯನ್ನು ತರುತ್ತೇವೆ ಎಂದರು.
ಇದನ್ನೂ ಓದಿ:ಪ್ರಣವಾನಂದ ಸ್ವಾಮೀಜಿ ನಮ್ಮ ಸಮಾಜದವರೇ ಅಲ್ಲ, ತಮ್ಮ ಪಬ್ಲಿಸಿಟಿಗಾಗಿ ನನ್ನ ವಿರುದ್ಧ ದೂರು ನೀಡಿದ್ದಾರೆ: ಸಚಿವ ಮಧು ಬಂಗಾರಪ್ಪ