ಕರ್ನಾಟಕ

karnataka

ETV Bharat / state

ಸಾಧಿಸಿರುವವರೆಲ್ಲರೂ ಟಾಪರ್‌ ಅಲ್ಲ.. ಅತ್ಯುತ್ತಮ ಸಾಧನೆ ಗುರಿ ಇಟ್ಕೊಳ್ಳಿ.. ಶಿಕ್ಷಣ ತಜ್ಞರಿಂದ ಪಿಯು ವಿದ್ಯಾರ್ಥಿಗಳಿಗೆ ಟಿಪ್ಸ್‌.. - puc exam 2022

ಪಿಯುಸಿ ಪರೀಕ್ಷೆ ಬರೆಯಲು ಮುಂದಾಗಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಗುರಿಯನ್ನಿಟ್ಟುಕೊಳ್ಳಬೇಕು. ಪರೀಕ್ಷೆ ಬರೆಯುವ ವೇಳೆ ಸಣ್ಣ ಮಟ್ಟಿನ ಸ್ಟ್ರೆಸ್ ಇರಬೇಕು ಎಂದು ಶಿಕ್ಷಣ ತಜ್ಞ ಅನಂತಪ್ರಭು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ..

ಶಿಕ್ಷಣ ತಜ್ಞ ಅನಂತಪ್ರಭು
ಶಿಕ್ಷಣ ತಜ್ಞ ಅನಂತಪ್ರಭು

By

Published : Apr 19, 2022, 6:12 PM IST

Updated : Apr 19, 2022, 7:07 PM IST

ಮಂಗಳೂರು :ದ್ವಿತೀಯ ಪಿಯುಸಿ ಪರೀಕ್ಷೆ ಏ. 22ರಿಂದ ಆರಂಭವಾಗಲಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಹೇಗೆ ತಯಾರಿ ನಡೆಸಬೇಕು. ಎಷ್ಟು ಅವಧಿ ಅವರು ಅಧ್ಯಯನ ಮಾಡಬೇಕು. ಈ ವೇಳೆ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಏನು?. ಅಗತ್ಯ ವಸ್ತುಗಳ ತಯಾರಿ ಹಾಗೂ ಮನೋಸ್ಥೈರ್ಯ ಸೇರಿದಂತೆ ಶಿಕ್ಷಣ ತಜ್ಞ ಅನಂತಪ್ರಭು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಅತ್ಯುತ್ತಮ ಸಾಧನೆ ಮಾಡುವ ಗುರಿ ಇಟ್ಟುಕೊಳ್ಳಿ

ಪಿಯುಸಿ ಪರೀಕ್ಷೆ ಬರೆಯಲು ಮುಂದಾಗಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಗುರಿಯನ್ನಿಟ್ಟುಕೊಳ್ಳಬೇಕು. ಪರೀಕ್ಷೆ ಬರೆಯುವ ವೇಳೆ ಸಣ್ಣಮಟ್ಟಿನ ಸ್ಟ್ರೆಸ್ ಇರಬೇಕು. ಇದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮೊಹಮ್ಮಾದಾಲಿ ಎಂಬ ಬಾಕ್ಸರ್ ತಾನು ಪ್ರತಿ ಪಂದ್ಯಕ್ಕೆ ಹೋಗುವಾಗ ನಾನೊಬ್ಬ ವಿಶ್ವದ ಶ್ರೇಷ್ಠ ಆಟಗಾರ ಎಂದು ಹೇಳಿಕೊಳ್ಳುತ್ತಿದ್ದ. ಈ ಮೂಲಕ ಮಾನಸಿಕವಾಗಿ ಗೆಲ್ಲಲು ತಯಾರಾಗುತ್ತಿದ್ದ. ಅದೇ ರೀತಿ ವಿದ್ಯಾರ್ಥಿಗಳು ನಾನು ಈ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವೆ ಎಂಬ ಗುರಿಯಿಟ್ಟು ಪರೀಕ್ಷೆ ಬರೆಯಬೇಕು ಎಂದು ಅವರು ಹೇಳಿದ್ದಾರೆ.

ಶಿಕ್ಷಣ ತಜ್ಞ ಅನಂತಪ್ರಭು ಮಾತನಾಡಿದರು

ಚೆಕ್‌ಲಿಸ್ಟ್ ಸಿದ್ದ ಮಾಡಿಕೊಳ್ಳಿ

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷೆಗೆ ಬೇಕಾಗುವ ವಸ್ತುಗಳ ಚೆಕ್ ಲಿಸ್ಟ್ ಮಾಡಬೇಕು. ಇದರಿಂದ ಕೊನೆ ಕ್ಷಣದಲ್ಲಿ ಮರೆತು ಬಂದಿದ್ದೇನೆ ಎಂಬ ಆತಂಕ ಇರುವುದಿಲ್ಲ. ಹಾಲ್ ಟಿಕೆಟ್, ಸ್ಟೇಷನರಿ, ಐಡಿ ಕಾರ್ಡ್ ಮೊದಲಾದ ಪರೀಕ್ಷೆ ಬರೆಯಲು ಅಗತ್ಯವಿರುವ ವಸ್ತುಗಳನ್ನು ಲಿಸ್ಟ್ ಮಾಡಿಟ್ಟರೆ ಪರೀಕ್ಷೆ ದಿನ ಧೈರ್ಯವಾಗಿ ಹೋಗಬಹುದು.

ಉತ್ತರ ಪತ್ರಿಕೆಯ ಆರಂಭದಲ್ಲಿ ಇಂಪ್ರೆಸನ್ ಮೂಡಿಸಿ

ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಕೈಗೆ ಸಿಕ್ಕಿದ ತಕ್ಷಣ ಎಲ್ಲಾ ಪ್ರಶ್ನೆಗಳನ್ನು ಓದಿ. ಗೊತ್ತಿರುವ ಉತ್ತರವನ್ನು ಮೊದಲಿಗೆ ಬರೆಯಿರಿ. ಮೊದಲ ಮೂರ್ನಾಲ್ಕು ಪೇಜ್‌ನಲ್ಲಿ ಉತ್ತಮವಾಗಿ ಉತ್ತರ ಬರೆದಿದ್ದರೆ ಈ ವಿದ್ಯಾರ್ಥಿಯ ಬಗ್ಗೆ ಮೌಲ್ಯಮಾಪಕರಿಗೂ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.

ಇನ್ನೂ ಉತ್ತರಪತ್ರಿಕೆಯಲ್ಲಿ ನೀವು ಬರೆದಿರುವ ಉತ್ತರವನ್ನು ಅಂಡರ್‌ಲೈನ್ ಮಾಡುವುದು ಮೌಲ್ಯಮಾಪಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕೆಲವು ಯಾವುದಾದರೂ ಐದನ್ನು ಉತ್ತರಿಸಿ ಎಂಬಂತಹ ಪ್ರಶ್ನೆಗಳಿದ್ದಾಗ ನಿಮಗೆ ಸಮಯವಿದ್ದರೆ, ಉತ್ತರ ಗೊತ್ತಿದ್ದರೆ ಆರನೇಯದ್ದಕ್ಕೂ ಉತ್ತರಿಸಿ. ಹೀಗೆ ಮಾಡಿದಾಗ ಅತ್ಯುತ್ತಮ ಇರುವ ಐದು ಆಯ್ಕೆಯಾಗುತ್ತವೆ.

ಪರೀಕ್ಷಾ ಅವಧಿ ಮುಗಿಯುವವರೆಗೆ ಕಾಯಿರಿ

ಪರೀಕ್ಷಾ ಅವಧಿಯ ಮೂರು ಗಂಟೆಗೂ ಮೊದಲೇ ಉತ್ತರ ಬರೆದು ಆಗಿದ್ದರೆ ಪರೀಕ್ಷಾ ಅವಧಿ ಮುಗಿಯುವವರೆಗೂ ಕಾಯಿರಿ. ಈ ಸಂದರ್ಭದಲ್ಲಿ ಉತ್ತರಪತ್ರಿಕೆಯನ್ನು ಮತ್ತೊಮ್ಮೆ ಓದಿ. ಪ್ರಶ್ನೆಯ ಸಂಖ್ಯೆ ಸರಿಯಾಗಿ ಬರೆದಿದ್ದೀರಾ? ಎಂಬುದನ್ನು ಗಮನಿಸಿ.

ಪರೀಕ್ಷೆ ಮುನ್ನ ಮತ್ತು ನಂತರ ಯಾರಲ್ಲೂ ಚರ್ಚಿಸಬೇಡಿ

ಪರೀಕ್ಷೆಗೆ ಹೋಗುವ ಸಂದರ್ಭದಲ್ಲಿ ಯಾರಲ್ಲೂ ಚರ್ಚಿಸಬೇಡಿ. ನೀವು ಓದದೆ ಇರುವ ವಿಷಯವನ್ನು ನಿಮ್ಮ ಸ್ನೇಹಿತರು ಇಂಪಾರ್ಟೆಂಟ್​ ಇದೆ ಎಂದು ಹೇಳಿ ದಿಗಿಲುಗೊಳಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ನೀವು ಉತ್ತಮವಾಗಿ ಅಭ್ಯಸಿಸಿದ್ದರೂ ಪರೀಕ್ಷೆ ಬರೆಯುವ ವೇಳೆ ದುಷ್ಪರಿಣಾಮ ಬೀರುತ್ತದೆ. ಪರೀಕ್ಷೆ ಮುಗಿದ ಬಳಿಕವೂ ಬರೆದ ಬಗ್ಗೆ ಚರ್ಚಿಸಬೇಡಿ. ಇದರಿಂದಾಗಿ ಮುಂದಿನ ವಿಷಯದ ಪರೀಕ್ಷೆ ಬರೆಯುವುದರ ಮೇಲೂ ಪರಿಣಾಮ ಬೀಳಲಿದೆ.

ಪರೀಕ್ಷೆ ಬರೆದ ಮೇಲೂ ಆತಂಕಪಡಬೇಡಿ

ಪರೀಕ್ಷೆ ಬರೆದ ಕೆಲವು ವಿದ್ಯಾರ್ಥಿಗಳು ಫಲಿತಾಂಶ ಬರುವ ತನಕ ಆತಂಕದಲ್ಲಿ ದಿನಕಳೆಯುತ್ತಾರೆ. ಪರೀಕ್ಷೆ ರಿಸಲ್ಟ್ ಬಗ್ಗೆ ಆತಂಕಪಡದೆ ಶಾಂತವಾಗಿದ್ದು ಪ್ಲಾನ್ ಬಿ , ಪ್ಲಾನ್ ಸಿ ಬಗ್ಗೆ ಯೋಚಿಸಿ. ಎಲ್ಲಾ ಯಶಸ್ವಿ ವ್ಯಕ್ತಿಗಳು ಟಾಪರ್ ಆಗಿಲ್ಲ ಎಂಬುದು ಗಮನ ಇರಲಿ.

ನಿದ್ದೆ ಮಾಡಿ

ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ನಿದ್ದೆಗೆಟ್ಟು ಓದುತ್ತಾರೆ. ಈ ರೀತಿ ಮಾಡಬೇಡಿ. ವಿದ್ಯಾರ್ಥಿಗಳು ಕಲಿತದ್ದನ್ನು ನೆನಪಿನಲ್ಲಿಡಲು ನಿದ್ರೆ ಅವಶ್ಯಕ. 6-7 ಗಂಟೆಯ ನಿದ್ದೆ ಅವಶ್ಯಕವಿದ್ದು, ಪರೀಕ್ಷೆಯ ಮುನ್ನಾ ದಿನ 8 ಗಂಟೆ ನಿದ್ರೆ ಮಾಡಿ. ಇದರಿಂದಾಗಿ ನೆನಪಿನಲ್ಲಿಡಲು ಸಹಾಯಕವಾಗಲಿದೆ ಎಂದವರು ತಿಳಿಸಿದ್ದಾರೆ.

ಓದಿ: ಶಿವಮೊಗ್ಗ: ಪ್ರಾಂಶುಪಾಲರಿಂದ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷಾ ಟಿಪ್ಸ್​

Last Updated : Apr 19, 2022, 7:07 PM IST

ABOUT THE AUTHOR

...view details