ಬೆಳ್ತಂಗಡಿ: ಕೇವಲ ಮಕ್ಕಳು ಮಾತ್ರವಲ್ಲದೆ ಶಿಕ್ಷಕರಿಗೂ ಶಾಲೆ ಪ್ರಾರಂಭವಾಗಿದೆ. ಅವರು ಸಂತಸದಿಂದ ಇದ್ದಾರೆ. ಇದು ಶಿಕ್ಷಕರು ಮಕ್ಕಳ ಮೇಲೆ ಇಟ್ಟಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಬಿ. ಎಸ್ ನಾಗೇಶ್ ಹೇಳಿದ್ದಾರೆ.
ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಚಿನ್ನರ ಅಂಗಳ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸ್ಲೇಟು ಹಾಗೂ ಬಳಪ ವಿತರಿಸಿ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸರ್ಕಾರದ ಜೊತೆ ಕೈ ಜೋಡಿಸಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಬೇಂಚ್, ಡೆಸ್ಕ್ ಉಚಿತವಾಗಿ ನೀಡುವ ಜೊತೆಗೆ ಆ ವಸ್ತುಗಳು ಸಂಬಂಧಿಸಿದ ಶಾಲಾ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ ಎಂದರು.
ಕೊರೊನಾ ಸಮಯದಲ್ಲಿ ಬಡವರಿಗೆ ಉಚಿತವಾಗಿ ಕಿಟ್ ನೀಡಿದ್ದಾರೆ. ಕೃಷಿ ಮೇಳ ಮಾಡಿ ರೈತರ ಖುಷಿಯಲ್ಲಿಯೂ ಬಾಗಿಯಾಗಿದ್ದಾರೆ. ಶಿಕ್ಷಣದಲ್ಲಿ ಸಂಸ್ಕಾರವನ್ನು ನೀಡುವ ಕೆಲಸ ಮಾಡಿದ್ದಾರೆ. ನೂತನ ಶಿಕ್ಷಣ ನೀತಿ ಬರುತ್ತಿದೆ. ಅದಕ್ಕೆ ಪೂಜ್ಯರ ಆಶೀರ್ವಾದ ಅಗತ್ಯ. ಜಿಲ್ಲೆಯಲ್ಲಿ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಹೇಳಿದರು.
ಕೋವಿಡ್ನಿಂದ ತುಂಬಾ ತೊಂದರೆಗೆ ಒಳಗಾದವರು ಪುಟ್ಟ ಮಕ್ಕಳು. ಬೇರೆ ಮಕ್ಕಳ ಜೊತೆ ಆಟ ಆಡಿ ಖುಷಿ ಪಡೆಯುವುದು ನಿಂತು ಹೋಗಿತ್ತು. ದೇವರ ಆಶೀರ್ವಾದದಿಂದ ಕೊರೊನಾ ಈಗ ಕಡಿಮೆ ಆಗಿದೆ. ದೇಶದ ಎಲ್ಲಾ ಜನರಿಗೂ ಉಚಿತ ವ್ಯಾಕ್ಸಿನ್ ನೀಡುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಇತರ ರಾಷ್ಟ್ರಗಳಿಗೂ ಹಂಚುವಂತಹ ಕೆಲಸ ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಹೋಗಿ ಮನವೊಲಿಸಿ ಜನತೆಗೆ ವಾಕ್ಸಿನ್ ಮಾಡಿಸಿದ್ದಾರೆ ಎಂದರು.