ಬಂಟ್ವಾಳ(ದ.ಕ):ಈ ಮನೆಯ ಹೆಸರೇ ಗುಬ್ಬಚ್ಚಿಗೂಡು. ಅರ್ಥಾತ್ ಇದು ಪಕ್ಷಿ ಸಂರಕ್ಷಣಾ ಜಾಗೃತಿಯ ನೆಲೆಬೀಡು. ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ತಮ್ಮ ಪತ್ನಿ ರಮ್ಯ ಅವರ ಸೀಮಂತವನ್ನು ಗುರುವಾರ ವಿಶೇಷವಾಗಿ ಆಚರಿಸಿದರು. 'ಹಸಿರು ಸೀಮಂತ' ಎಂಬ ಕಲ್ಪನೆಯೊಂದಿಗೆ ಪರಿಸರಸ್ನೇಹಿಯಾಗಿ ವಿಶಿಷ್ಠ ಆಚರಣೆ ಇಲ್ಲಿ ನಡೆಯಿತು.
ಸೀಮಂತದಲ್ಲಿ ಕಂಡುಬಂದ ಪರಿಸರಸ್ನೇಹಿ ಫಲಕ ಕೃಷಿಕರಾಗಿರುವ ನಿತ್ಯಾನಂದ ಶೆಟ್ಟಿ ಅವರು ಪಕ್ಷಿ, ಪತಂಗ, ಜೀವಿಸಂಕುಲ ಸಹಿತ ಪರಿಸರದ ಉಳಿವಿಗಾಗಿ ಕಳೆದ ಹಲವಾರು ವರ್ಷಗಳಿಂದ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು ಇದರ ಯಶಸ್ವಿಯಲ್ಲಿ ಪತ್ನಿ ರಮ್ಯ ಅವರ ಸದಭಿರುಚಿಯ ಸಹಕಾರ ಮಹತ್ತರವಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿಯ ಸೀಮಂತವನ್ನು ಹಸಿರುಮಯವಾಗಿ ರೂಪಿಸುವ ಉದ್ದೇಶದ ಈ ಕಾರ್ಯಕ್ರಮ ನೆರೆದವರ ಮನದಲ್ಲಿ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಪ್ರವೇಶ ದ್ವಾರದಲ್ಲಿ ಸಾಂಪ್ರದಾಯಿಕ ಬಾಳೆದಿಂಡು, ಕಾಯಿ, ಎಲೆಗಳ ಹಸಿರು ತೋರಣ, ಅಲ್ಲಲ್ಲಿ ಮೂಂಡಿ ಎಲೆಯಲ್ಲಿ ಬರೆದು ಹಾಕಲಾದ ಪರಿಸರ ಸಂರಕ್ಷಣೆಯ ಜಾಗೃತಿ ಫಲಕಗಳು. ಎಲ್ಲೆಂದರಲ್ಲಿ ಹಾರಿ ಬರುವ ಪಕ್ಷಿಗಳ ನೀರಾಡಿಕೆ ನಿವಾರಿಸಲು ಅಲ್ಲಲ್ಲಿ ಇಟ್ಟ ಮಣ್ಣಿನ ಮಡಿಕೆಗಳು, ಊಟೋಪಚಾರದಲ್ಲಿ ಪ್ಲಾಸ್ಟಿಕ್ ಮುಕ್ತ ಸಲಕರಣೆಗಳ ಬಳಕೆ, ಸಮಾರಂಭದಲ್ಲಿ ನೆರೆದ ಬಂಧುಮಿತ್ರರ ಮನೆಗೊಂದು ಬಾಳೆಗಿಡಗಳ ವಿತರಣೆ, ಪಕ್ಷಿಗಳ ಆಹಾರ ಸಾಮಾಗ್ರಿ ಮತ್ತು ಪಕ್ಷಿ ಪತಂಗ ಲೋಕದ ಸಂರಕ್ಷಣೆಯ ಕರಪತ್ರ ಹಂಚಿಕೆ ಸೀಮಂತ ಕಾರ್ಯಕ್ರಮದಲ್ಲಿ ಹೃದಯ ಶ್ರೀಮಂತಿಕೆಯ ದ್ಯೋತಕವಾಗಿ ಗಮನ ಸೆಳೆಯಿತು.
ಆಮಂತ್ರಣವು ಹಸಿರುಮಯವಾಗಿದ್ದು ಕಾರ್ಯಕ್ರಮಗಳ ವಿವರಣೆಗಳನ್ನು ಬಾಳೆಎಲೆಯಲ್ಲಿ ಬಿಳಿ ಬಣ್ಣದಲ್ಲಿ ಬರೆದು ಹಾಕಿದ್ದು ವಿಶೇಷ ಗಮನ ಸೆಳೆಯಿತು. ಪಕ್ಷಿಗಳ ಬಂಧನ ತರವಲ್ಲ, ಅವುಗಳನ್ನು ಬದುಕಲು ಬಿಡಿ, ಪ್ರಕೃತಿಗೆ ಶರಣಾಗೋಣ.ಇಲ್ಲದಿದ್ದರೆ ಪ್ರಕೃತಿಯೇ ನಮ್ಮನ್ನು ಶರಣಾಗಿಸುತ್ತದೆ, ಪಕ್ಷಿಗಳ ಗೂಡನ್ನು ಮುಟ್ಟದಿರಿ, ಅವುಗಳ ಮೊಟ್ಟೆಯನ್ನು ಒಡೆಯದಿರಿ ಎಂಬಿತ್ಯಾದಿ ಫಲಕಗಳು ಗಮನ ಸೆಳೆದವು.