ಕರ್ನಾಟಕ

karnataka

ETV Bharat / state

ಕೊರೊನಾ ಕಾಲದಲ್ಲಿ ವರವಾಯ್ತು ಇ -ಸಂಜೀವಿನಿ ಆ್ಯಪ್: ಮನೆಯಿಂದಲೇ ವೈದ್ಯರ ಭೇಟಿ - Mangalore Latest News

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಇ-ಸಂಜೀವಿನಿ ಆ್ಯಪ್ ಜಾರಿಗೆ ತಂದಿದೆ. ಈ ಮೂಲಕ ಆ್ಯಪ್​ನಲ್ಲಿ ನೋಂದಣಿ ಮಾಡಿಕೊಂಡು ಮನೆಯಲ್ಲಿದ್ದುಕೊಂಡೇ ಸುಲಭವಾಗಿ ನೋಂದಾಯಿತ ವೈದ್ಯರನ್ನು ಆ್ಯಪ್​ನಲ್ಲಿರುವ ವಿಡಿಯೊ ಕರೆಯ ಮೂಲಕ ಸಂಪರ್ಕಿಸಿ ಚಿಕಿತ್ಸೆ, ಸಲಹೆ ಪಡೆಯಬಹುದು.

ಇ-ಸಂಜೀವಿನಿ ಆ್ಯಪ್
ಇ-ಸಂಜೀವಿನಿ ಆ್ಯಪ್

By

Published : Sep 29, 2020, 5:53 PM IST

ಮಂಗಳೂರು:ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಜನರು ಇತರ ರೋಗದಿಂದ ಬಳಲುತ್ತಿದ್ದರೂ ಆಸ್ಪತ್ರೆಗೆ ತೆರಳಲು ಹೆದರುತ್ತಿದ್ದಾರೆ. ಇಂತಹ ತುರ್ತು ಆರೋಗ್ಯ ಸಮಸ್ಯೆಗಳಿಗೆಂದೇ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಇ - ಸಂಜೀವಿನಿ ಆ್ಯಪ್ ಜಾರಿಗೆ ತಂದಿದೆ. ಈ ಆ್ಯಪ್​ನ ಸದುಪಯೋಗ ಪಡೆದುಕೊಂಡು ಸಾರ್ವಜನಿಕರು ಕೊರೊನಾ ಸಹಿತ ಇತರ ರೋಗಗಳಿಗೆ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುವ ಅವಕಾಶವಿದೆ.

ದ.ಕ.ಜಿಲ್ಲೆಯಲ್ಲಿಯೂ ಇದೀಗ ಈ ಆ್ಯಪ್ ಕಾರ್ಯಯೋಜಿತಗೊಂಡಿದೆ. ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ 24 ತಜ್ಞ ವೈದ್ಯರು ಇ-ಸಂಜೀವಿನಿ ಆ್ಯಪ್​ನಲ್ಲಿ ನೋಂದಾಯಿತರಾಗಿದ್ದಾರೆ. ರೋಗಿಗಳು ಈ ಆ್ಯಪ್​ನಲ್ಲಿ ನೋಂದಣಿ ಮಾಡಿಕೊಂಡು ಮನೆಯಲ್ಲಿದ್ದುಕೊಂಡೇ ಸುಲಭವಾಗಿ ನೋಂದಾಯಿತ ವೈದ್ಯರನ್ನು ಆ್ಯಪ್​ನಲ್ಲಿರುವ ವಿಡಿಯೊ ಕರೆಯ ಮೂಲಕ ಸಂಪರ್ಕಿಸಬಹುದು.

ಸಾಮಾನ್ಯ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವವರು ಇ-ಸಂಜೀವಿನಿ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ತಜ್ಞರ ಸಲಹೆ ಪಡೆದುಕೊಳ್ಳಬಹುದು. ಇದಕ್ಕೆ ಮಾಡಬೇಕಾಗಿರೋದು ಇಷ್ಟೇ, ಮೊಬೈಲ್​ನಲ್ಲಿರುವ ಗೂಗಲ್​ ಪ್ಲೆಸ್ಟೋರ್ ಮೂಲಕ ಇ-ಸಂಜೀವಿನಿ ಆ್ಯಪ್ ಡೌನ್‌ಲೋಡ್ ಮಾಡಬೇಕು. ಅಥವಾ ಗೂಗಲ್​ನಲ್ಲಿ‌ ಇ - ಸಂಜೀವಿನಿ ಒಪಿಡಿ ಎಂದು ನಮೂದಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡಾಗ ಪರದೆಯ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ರಿಜಿಸ್ಟ್ರೇಷನ್​ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದಾಗ ಒಟಿಪಿ ಸಂಖ್ಯೆ ಬರುತ್ತದೆ. ಈ ಒಟಿಪಿ ಸಂಖ್ಯೆ ನಮೂದಿಸಿದಲ್ಲಿ‌ ರಿಜಿಸ್ಟ್ರೇಷನ್ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗ್ ಇನ್ ಆಗಬೇಕು. ಆಗ ಟೋಕನ್ ಸಂಖ್ಯೆ ಲಭ್ಯವಾಗುತ್ತದೆ. ಟೋಕನ್ ಸಂಖ್ಯೆ ನೀಡಿ ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ನಿತ್ಯ ಬೆಳಗ್ಗೆ 10 ರಿಂದ ಸಂಜೆ 4.30ರವರೆಗೆ ವೈದ್ಯರನ್ನು ಸಂಪರ್ಕಿಸಬಹುದು. ಒಮ್ಮೆ ನೋಂದಣಿ ಆದವರು ಮತ್ತೆ ನೋಂದಣಿ ಆಗಬೇಕೆಂದು ಇಲ್ಲ.‌

ಇನ್ನು ಈ ಬಗ್ಗೆ ಮಾಹಿತಿ ನೀಡಿದ ದ.ಕ.ಜಿಲ್ಲಾ ನೋಡಲ್ ಅಧಿಕಾರಿ ಡಾ.ರತ್ನಾಕರ್ ಮಾತನಾಡಿ, ಇ-ಸಂಜೀವಿನಿ ಆ್ಯಪ್ ಅನ್ನು ಮೊಬೈಲ್ ಫೋನ್​ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಜ್ಞ ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಸಾರ್ವಜನಿಕರು ಅವರಿರುವ ಸ್ಥಳದಿಂದಲೇ ರೋಗಗಳ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ವೈದ್ಯರನ್ನು ಸಂಪರ್ಕಿಸುವ ಸಂದರ್ಭದಲ್ಲಿ ಅಗತ್ಯವಿದಲ್ಲಿ ಇ - ರಶೀದಿ (E - Proscription) ಸೌಲಭ್ಯವೂ ಇದರಲ್ಲಿದೆ. ಈ ಮೂಲಕ ಔಷಧಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ವೆನ್ಲಾಕ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಸದಾನಂದ ಪೂಜಾರಿ ಮಾತನಾಡಿ, ಜ್ವರ, ಶೀತ, ಕೆಮ್ಮು ಮತ್ತಿತರ ಸಣ್ಣಪುಟ್ಟ ರೋಗಿಗಳಿಗೆ ಆಸ್ಪತ್ರೆಗೆ ಧಾವಿಸುವ ಬದಲು ಸಾರ್ವಜನಿಕರು ಇ - ಸಂಜೀವಿನಿ ಟೆಲಿ ಮೆಡಿಸಿನ್ಸ್ ಅನ್ನು ಸಮರ್ಥವಾಗಿ ಬಳಸಬಹುದು. ವೈದ್ಯರುಗಳನ್ನು ಸಂಪರ್ಕಿಸಿ ಸಲಹೆ - ಸೂಚನೆಗಳನ್ನು ಪಡೆದುಕೊಳ್ಳಬಹುದು. ದ.ಕ.ಜಿಲ್ಲೆಯಲ್ಲಿ ಈಗಾಗಲೇ ಇ-ಸಂಜೀವನಿ ಆ್ಯಪ್ ಮೂಲಕ ನೂರಕ್ಕೂ ಅಧಿಕ‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.

ABOUT THE AUTHOR

...view details