ಕರ್ನಾಟಕ

karnataka

By

Published : Oct 14, 2021, 8:45 AM IST

ETV Bharat / state

ನೈತಿಕ ಪೊಲೀಸ್​​ಗಿರಿ ಕುರಿತ ಸಿಎಂ ಹೇಳಿಕೆಗೆ ಆಕ್ರೋಶ; ಕ್ಷಮೆಯಾಚನೆಗೆ ಡಿವೈಎಫ್ಐ ಆಗ್ರಹ

ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರು ವಾಹನ ಅಡ್ಡಗಟ್ಟಿ ನೈತಿಕ ಪೊಲೀಸ್​​​ಗಿರಿ ತೋರಿದ್ದ ವಿಚಾರವಾಗಿ ಸಿಎಂ ಬೊಮ್ಮಾಯಿ ನೀಡಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

Muneer Katipalla
ಮುನೀರ್ ಕಾಟಿಪಳ್ಳ

ಮಂಗಳೂರು:ನೈತಿಕ ಪೊಲೀಸ್‌ಗಿರಿ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಹೇಳಿಕೆಯ ವಿರುದ್ಧ ಡಿವೈಎಫ್ಐ (ಡೆಮಾಕ್ರೆಟಿಕ್ ಯೂಥ್​ ಫೆಡರೇಷನ್ ಆಫ್ ಇಂಡಿಯಾ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಬೆಂಗಳೂರಿನಲ್ಲಿ ಮುಸಲ್ಮಾನ ಗೂಂಡಾಗಳು ಅನ್ಯಧರ್ಮದ ಪುರುಷ ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಿದಾಗ ಸಿಡಿದೆದ್ದು ಕಾನೂನಿನ ಪಾಠ ಮಾಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಗಳೂರಿನ ಸಂಘ ಪರಿವಾರದ ಅನೈತಿಕ ಗೂಂಡಾಗಿರಿಯ ವಿಷಯದಲ್ಲಿ ಉಲ್ಟಾ ಹೊಡೆದಿದ್ದಾರೆ' ಎಂದು ಟೀಕಿಸಿದ್ದಾರೆ.

'ಭಾವನೆಗಳಿಗೆ ಧಕ್ಕೆ, ಕ್ರಿಯೆಗೆ ಪ್ರತಿಕ್ರಿಯೆ ಎಂಬುದು ಎಲ್ಲಾ ಮತೀಯವಾದಿಗಳ ರೆಡಿಮೇಡ್ ಡೈಲಾಗ್ ಆಗಿದೆ. ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿರುವ ಮುಖ್ಯಮಂತ್ರಿಯೊಬ್ಬರು ಅದೇ ಡೈಲಾಗ್ ಹೊಡೆಯುತ್ತಾರೆ. ಅನೈತಿಕ ಪೊಲೀಸ್​ಗಿರಿಯನ್ನು ಸಮರ್ಥಿಸುತ್ತಾರೆ ಅಂತಾದರೆ ಮುಂದಿನ ಗತಿಯೇನು' ಎಂದು ಅವರು ಪ್ರಶ್ನಿಸಿದರು.

'ಮುಖ್ಯಮಂತ್ರಿಯ ಈ ಮಾತಿನಿಂದ ಮತೀಯವಾದಿ ಸಂಘಟನೆಗಳ ಕಾರ್ಯಕರ್ತರು ಮತ್ತಷ್ಟು ಪ್ರಚೋದಿತರಾಗಿ ಬೀದಿಗಿಳಿಯುವುದು ಖಂಡಿತ. ಕ್ರಿಯೆಗೆ ಪ್ರತಿಕ್ರಿಯೆ ಎಂದು ಮತ್ತೊಂದು ಕೋಮಿನ ಅನೈತಿಕ ಪೊಲೀಸರೂ ಸ್ಪರ್ಧೆಗೆ ಬಿದ್ದರೆ ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ? ಮುಖ್ಯಮಂತ್ರಿಯೊಬ್ಬರು ಇಷ್ಟು ಬೇಜವಾಬ್ದಾರಿತನ ಮೆರೆಯುವುದು ನಾಚಿಕೆಗೇಡು. ಹೀಗಾಗಿ ಸಿಎಂ ಜನತೆಯ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಇದಕ್ಕೂ ಮೊದಲು ಮಂಗಳೂರು ಘಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ, 'ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಧಕ್ಕೆ ಬಂದಾಗ ಸಹಜವಾಗಿ ಕ್ರಿಯೆ, ಪ್ರತಿಕ್ರಿಯೆ ಆಗುತ್ತದೆ' ಎಂದು ಹೇಳಿದ್ದರು.

ಇದನ್ನೂ ಓದಿ:ಭಾವನೆಗಳಿಗೆ ಧಕ್ಕೆ ಆದಾಗ ಕ್ರಿಯೆ- ಪ್ರತಿಕ್ರಿಯೆ ಆಗುತ್ತದೆ; ನೈತಿಕ ಪೊಲೀಸ್ ಗಿರಿ ಬಗ್ಗೆ ಸಿಎಂ ಮಾತು

ABOUT THE AUTHOR

...view details