ಮಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಖಾಸಗಿ ಆಸ್ಪತ್ರೆಗಳಲ್ಲಿಯೂ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೋಂಕಿತರು ಗುಣಮುಖರಾಗಿ ತೆರಳುವಾಗ ಲಕ್ಷಾಂತರ ರೂ. ಹಣವನ್ನು ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡುತ್ತಿವೆ. ಇದು ಸೋಂಕಿತರಿಗೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಹ ಸ್ಥಿತಿಯಂತಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿನಿಂದ ದಾಖಲಾಗಿ ಬುಧವಾರ ಗುಣಮುಖನಾಗಿ ಬಿಡುಗಡೆ ಹೊಂದಿರುವವರ ಬಿಲ್ ವೈರಲ್ ಆಗಿದ್ದು, 1,80,000 ಲಕ್ಷ ರೂ. ಬಿಲ್ ಹಾಕಲಾಗಿದೆ. ಈ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಕಿಡಿಕಾರಿದ್ದಾರೆ.
ಈ ಬಗ್ಗೆ ಮುನೀರ್ ಕಾಟಿಪಳ್ಳ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಸಮುದಾಯದ ಮಧ್ಯೆ ಹರಡಿರೋದು ಎಲ್ಲರಿಗೂ ತಿಳಿದ ಸಂಗತಿ. ಈ ಸಂದರ್ಭ ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಹಣಕ್ಕಾಗಿ ಪೀಡಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ರಾಜ್ಯ ಸರ್ಕಾರ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 10 ಸಾವಿರ ರೂ. ದರ ನಿಗದಿ ಮಾಡಿತ್ತು. ನಾವು ಇದನ್ನು ವಿರೋಧಿಸಿದ್ದರೂ, ಸರ್ಕಾರ ಅದಕ್ಕೆ ಮನ್ನಣೆ ನೀಡಿರಲಿಲ್ಲ. ಆದರೆ ಇದೀಗ ಖಾಸಗಿ ಆಸ್ಪತ್ರೆಗಳು ಸರ್ಕಾರದ ಈ ನೀತಿಯನ್ನು ಬಳಸಿಕೊಂಡು ದಿನಕ್ಕೆ ರೋಗ ಲಕ್ಷಣ ಇಲ್ಲದಿರುವವರಿಂದಲೂ, ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದಿರುವವರಿಂದಲೂ 15 ಸಾವಿರ ರೂ. ವರೆಗೆ ವಸೂಲು ಮಾಡುತ್ತಿದೆ ಎಂದು ಆರೋಪಿಸಿದರು.