ದುಬಾರಿ ದರ ವಿಧಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಡಿವೈಎಫ್ಐ ಆಗ್ರಹ - DYFI request to dc
ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಕುರಿತು ರಾಜ್ಯ ಸರಕಾರ ಈಗಾಗಲೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೂ ಕೆಲವು ಖಾಸಗಿ ಆಸ್ಪತ್ರೆಗಳು ದುಬಾರಿ ದರ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಡಿವೈಎಫ್ಐ ನಿಯೋಗ ಮನವಿ ಸಲ್ಲಿಸಿದೆ.

ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಡಿವೈಎಫ್ಐ ಆಗ್ರಹ
ಮಂಗಳೂರು: ಸರಕಾರದ ನಿಯಮ ಮೀರಿ ಕೊರೊನಾ ಸೋಂಕಿತರಿಗೆ ದುಬಾರಿ ದರ ವಿಧಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿವೈಎಫ್ಐ ನಿಯೋಗ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿತು.
ಈ ಕುರಿತು ಮಂಗಳೂರಿನ ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿ ಪಡಿಸಿದ ದರವನ್ನೂ ಮೀರಿ ದುಪ್ಪಟ್ಟು ದರ ವಿಧಿಸಿದ ಬಿಲ್ ಅನ್ನು ಮನವಿಯೊಂದಿಗೆ ಲಗತ್ತಿಸಿದ್ದು, ಈ ಕುರಿತು ಸರಿಯಾದ ತನಿಖೆ ನಡೆಸಬೇಕು ಎಂದು ಮನವಿ ಮಾಡಿದೆ. ಸರಕಾರದ ನಿಯಮ ಪ್ರಕಾರ ಔಷಧಿ, ಪರೀಕ್ಷೆ ಎಲ್ಲಾ ಸೇರಿ ದಿನವೊಂದಕ್ಕೆ 12,000 ರೂ. ದರ ವಿಧಿಸಬೇಕು. ಆದರೆ ಯುನಿಟಿ ಆಸ್ಪತ್ರೆ ವಾರ್ಡ್ ಸರ್ವೀಸ್ ಅಂತ ಆಮ್ಲಜನಕ ನೀಡಿದ್ದಕ್ಕೆ ದಿನವೊಂದಕ್ಕೆ ಹೆಚ್ಚುವರಿ 4,500 ರೂ.ನಂತೆ 10 ದಿನಕ್ಕೆ 45,000 ರೂ. ದರ ವಿಧಿಸಿದೆ. ರಕ್ತ ಪರೀಕ್ಷೆಗಳಿಗೆ 15,000 ರೂ. ಹೆಚ್ಚುವರಿ ದರ, ಔಷಧಿಗಳಿಗಂತೂ ಅತಿ ದುಬಾರಿ 1 ಲಕ್ಷ ರೂ. ದರ ವಿಧಿಸಿದೆ. ಒಟ್ಟಾರೆ 11 ದಿನಗಳಿಗೆ ಸರಿ ಸುಮಾರು ಮೂರು ಲಕ್ಷ ರೂ. ಬಿಲ್ ವಿಧಿಸಿದೆ. ಅದರಲ್ಲೂ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ನೀಡುವ ದುಬಾರಿ "COVIFOR" ಇಂಜೆಕ್ಷನ್ ಅನ್ನು ಇಲ್ಲಿ ಬಳಸಲಾಗಿದೆ. ಹೊರಗಡೆಯಲ್ಲಿ 2,200 ರೂ.ಗೆ ಸಿಗುತ್ತದೆ ಎನ್ನಲಾದ ಈ ಔಷಧಿಯನ್ನು ಆಸ್ಪತ್ರೆ 5400 ರೂ. ದರ ವಿಧಿಸಿದೆ. ತಲಾ 6 ಇಂಜಕ್ಷನ್ ಕೊಡಬೇಕಾಗುವ ಈ ಔಷಧಿಯನ್ನು ವಿಪರೀತ ಲಾಭದ ಕಾರಣಕ್ಕಾಗಿಯೇ ಸೋಂಕಿತರಿಗೆ ನೀಡಲಾಗುತ್ತಿದೆ ಎಂಬ ಅನುಮಾನ ಇದೆ.
ಈ ಕುರಿತು ವಿವರವಾದ ತನಿಖೆ ನಡೆದರೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಯ ಹೆಸರಿನಲ್ಲಿ ನಡೆಯುವ ಅವ್ಯವಹಾರ ಬಯಲಿಗೆ ಬರುವ ಸಾಧ್ಯತೆ ಇದೆ.ಇಷ್ಟು ಮಾತ್ರ ಅಲ್ಲದೆ, ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆಗೆ ಜಿಲ್ಲಾಡಳಿತ ಎಂಟು ಖಾಸಗಿ ಮೆಡಿಕಲ್ ಕಾಲೇಜು, ಒಂದು ಖಾಸಗಿ ಆಸ್ಪತ್ರೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಕಡಿಮೆ ಮೊತ್ತ ದೊರಕುವ ಹಿನ್ನೆಲೆ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂದು ರೋಗಿಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ. ಈ ಕುರಿತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತಿದ್ದೇವೆ. ಆರೋಗ್ಯ ಇಲಾಖೆಯ ವಿಶೇಷ ತಂಡವೊಂದು ದಿಢೀರ್ ಭೇಟಿಯ ಮೂಲಕ ಖಾಸಗಿ ಆಸ್ಪತ್ರೆಗಳನ್ನು ಪರಿಶೀಲನೆ ಮಾಡುವ ಕ್ರಮ ಜಾರಿಗೆ ತರಬೇಕು. ತಪ್ಪಿತಸ್ಥ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಆಡಳಿತದ ಮೇಲೆ ಕಠಿಣ ಕ್ರಮಗಳನ್ನು ಕೈಗೊಂಡು ಈಗ ಇರುವ ಅವ್ಯವಸ್ಥೆಯನ್ಜು ಸರಿಪಡಿಸಿ ಜನತೆಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಈ ಮೂಲಕ ಮನವಿ ಮಾಡಲಾಗುತ್ತಿದೆ ಎಂದು ಡಿವೈಎಫ್ಐ ನಿಯೋಗ ತಿಳಿಸಿದೆ.
ನಿಯೋಗದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಅಶ್ರಫ್ ಕೆ.ಸಿ.ರೋಡ್, ನಿತಿನ್ ಕುತ್ತಾರ್, ಸುನಿಲ್ ತೇವುಲ ಉಪಸ್ಥಿತರಿದ್ದರು.