ಬಂಟ್ವಾಳ(ದ.ಕ): ಕೊರೊನಾ ವೇಳೆ ಸಕ್ರಿಯವಾಗಿದ್ದ ಕೃಷಿ ಕ್ಷೇತ್ರಕ್ಕೆ ರಸಗೊಬ್ಬರ ಎಂದಿಗಿಂತ ಶೇ. 36.2 ಜಾಸ್ತಿ ಮಾರಾಟವಾಗಿದ್ದು, ನೇರವಾಗಿ ರೈತರ ಅಕೌಂಟ್ಗೆ ಸಹಾಯಧನವನ್ನೂ ಪಾವತಿಸಲಾಗಿದೆ. ಇದರಲ್ಲಿ ಇಪ್ಕೋ ಪಾತ್ರ ಪ್ರಧಾನವಾದದ್ದು. ಇನ್ನು ನ್ಯಾನೋ ರಸಗೊಬ್ಬರ ವಿತರಣೆ ಆರಂಭವಾದರೆ ದೇಶದ ಕೃಷಿ ಉತ್ಪಾದನೆಯೂ ಜಾಸ್ತಿಯಾಗಬಹುದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿ. ಬೆಂಗಳೂರು, ಸದಾಸ್ಮಿತ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಅನ್ನು ಶನಿವಾರ ಸಂಜೆ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು. ಇಪ್ಕೋ ಸಂಸ್ಥೆಯಿಂದ ಸಾವಯವ ಹಾಗೂ ನ್ಯಾನೋ ಫರ್ಟಿಲೈಸರ್ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದ್ದು, ದೇಶದಲ್ಲಿ 13 ಸಾವಿರ ರೈತರಿಗೆ ಪ್ರಾಯೋಗಿಕವಾಗಿ ನ್ಯಾನೋ ಫರ್ಟಿಲೈಸರ್ ವಿತರಿಸಲಾಗಿದೆ. ಇದರಿಂದ ಶೇ. 18ರಷ್ಟು ಉತ್ಪಾದನೆ ಹೆಚ್ಚಾಗಿ, ಶೆ. 20ರಷ್ಟು ಉತ್ಪಾದನಾ ವೆಚ್ಚ ಕಡಿಮೆಯಾಗಿದೆ ಎಂದರು.