ಪುತ್ತೂರು: ತಾಲೂಕಿನ ಕೊಳ್ತಿಗೆ ಗ್ರಾಮದ ಸಿದ್ದಮೂಲೆ-ಕೆಮ್ಮಾರ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಪರಿಶಿಷ್ಟ ಜಾತಿಯ 6 ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಹಾಗು ಶೌಚಾಲಯ ವ್ಯವಸ್ಥೆಯನ್ನು ಕೂಡಲೇ ಮಾಡಿಕೊಡುವಂತೆ ಆಗ್ರಹಿಸಿ ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಕೊಳ್ತಿಗೆ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ದಲಿತ ಸೇವಾ ಸಮಿತಿಯಿಂದ ಪ್ರತಿಭಟನೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ. ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು, ಸಿದ್ಧಮೂಲೆ ಮತ್ತು ಕೆಮ್ಮಾರದ ಆರು ಕುಟುಂಬಗಳು ರಸ್ತೆ ಬದಿಯ ಕೆರೆಯ ಕೊಳಕು ನೀರನ್ನು ಕುಡಿದು ಬದುಕುತ್ತಿದ್ದಾರೆ ಎಂದಾದರೆ, ಇಲ್ಲಿನ ಪಂಚಾಯತ್ ಆಡಳಿತವನ್ನು ನಾವು ಅಭಿನಂದಿಸಬೇಕೇ? ಇಲ್ಲಾ ಅವರಿಗೆ ಧಿಕ್ಕಾರ ಹಾಕಬೇಕೇ ಎಂದು ಪ್ರಶ್ನಿಸಿದರು.
ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ದಲಿತ್ ಸೇವಾ ಸಮಿತಿಯಿಂದ ಪ್ರತಿಭಟನೆ ಕ್ಷೇತ್ರಕ್ಕೆ ಕೋಟಿ-ಕೋಟಿ ಅನುದಾನ ತರಿಸಿರುವುದಾಗಿ ಹೇಳಿಕೊಂಡು ಬ್ಯಾನರ್ ಹಾಕಿಸಿಕೊಂಡಿರುವ ಇಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರಿಗೆ ಈ ಕೆಲಸವನ್ನು ಯಾಕೆ ಮಾಡಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ರಸ್ತೆ ವಿಚಾರದಲ್ಲಿ ನಮ್ಮ ಹಕ್ಕಿಗೋಸ್ಕರ ಹೋರಾಡಲು ತಯಾರಾಗಿಯೇ ಬಂದಿದ್ದೇವೆ. ನೀರಿನ ವ್ಯವಸ್ಥೆಯ ವಿಚಾರದಲ್ಲಿ ಕೇವಲ ಅನುದಾನ ಇಟ್ಟರೆ ಸಾಲದು, ಯಾವಾಗ ಕಾಮಗಾರಿ ಆರಂಭಿಸುತ್ತೀರಿ ಎಂದು ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಎಚ್ಚರಿಸಿದರು.
ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ದಲಿತ್ ಸೇವಾ ಸಮಿತಿಯಿಂದ ಪ್ರತಿಭಟನೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಅವರು ಮಾತನಾಡಿ, ಸಿದ್ಧಮೂಲೆಗೆ ಶಾಶ್ವತ ನೀರಿನ ವ್ಯವಸ್ಥೆ ಮಾಡಿಕೊಡುತ್ತೇವೆ. ಅದಕ್ಕಾಗಿಯೇ ಜಲಜೀವನ್ ಮಿಷನ್ ಯೋಜನೆಯಡಿ ರೂ. 7 ಲಕ್ಷದ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಯೋಜನೆ ಅನುಷ್ಠಾನಕ್ಕೆ 1 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದರು. ಆದರೆ, ಪ್ರತಿಭಟನಾಕಾರರು ಈ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮ ಸುಂದರ್ ರೈ ಅವರು, ಜಲಜೀವನ್ ಮಿಷನ್ ಯೋಜನೆಯಡಿ ಸಿದ್ಧಮೂಲೆಗೆ ರೂ. 7 ಲಕ್ಷ ಅನುದಾನದ ಕುಡಿಯುವ ನೀರಿನ ಯೋಜನೆ ತಯಾರಿಸಲಾಗಿದೆ. ಇಂದಿನಿಂದ 1 ತಿಂಗಳ ಕಾಲ ಅಲ್ಲಿಗೆ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ದಲಿತ್ ಸೇವಾ ಸಮಿತಿಯಿಂದ ಪ್ರತಿಭಟನೆ ಈಗಾಗಲೇ ಸರ್ಕಾರಿ ಜಾಗದಲ್ಲಿ ಇರುವ ನೀರಾವರಿ ವ್ಯವಸ್ಥೆಯ ಕೆರೆಯ ಸುತ್ತ ಬೇಲಿ ನಿರ್ಮಿಸಿ, ನೀರನ್ನು ಶುಚಿಗೊಳಿಸಿಕೊಡಲಾಗುವುದು. ರೂ. 7ಲಕ್ಷದ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ ಅಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯತ್ ಈ ನಿರ್ಧಾರವನ್ನು ಲಿಖಿತವಾಗಿ ನೀಡಿದ ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂಪಡೆದರು.
ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಚಂದ್ರಶೇಖರ್, ಕುಶಾಲಪ್ಪ ಮೂಡಂಬೈಲು, ಸೋಮಪ್ಪ ನಾಯ್ಕ ಮಲ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರು, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಬಿ. ಕೆ ಅಣ್ಣಪ್ಪ ಕಾರೆಕ್ಕಾಡು, ಸಂಘಟನೆಯ ಪ್ರಮುಖರಾದ ಧನಂಜಯ ನಾಯ್ಕ ಬಲ್ನಾಡು, ಚಂದ್ರ ಇದ್ಪಾಡಿ, ಸಂಜೀವ ಹೆಗ್ಡೆಕ್ಕೋಡಿ, ಲಲಿತಾ ನಾಯ್ಕ, ಸುನಂದಾ ತೆಂಕಿಲ, ಲಲಿತಾ ವಾಲ್ತಾಜೆ, ಕೆ. ರಮೇಶ್ ಕಡಂಬು, ರಾಮಣ್ಣ ಪಿಲಿಂಜೆ, ಗುರುವಪ್ಪ ಎನ್, ಕೆ. ನಾರಾಯಣ ಕೆಮ್ಮತಕಾನ, ಮಹಾಲಿಂಗ ಪೆಲತೋಡಿ, ಸ್ಥಳೀಯರಾದ ಸೀನ, ಲವ, ಬಬಿತಾ, ಉಮೇಶ್ ಮತ್ತಿತರರು ಇದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ