ಮಂಗಳೂರು: ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ಈ ಮೂಲಕ ಗಾಂಜಾ ಸೇವನೆ ಪ್ರಕರಣದಲ್ಲಿ ಈವರೆಗೆ 13 ಮಂದಿಯನ್ನು ಬಂಧಿಸಿದಂತಾಗಿದೆ.
ಬಂಧಿತರು ಯಾರು? ಎಲ್ಲಿಯವರು?: ವೈದ್ಯಕೀಯ ವಿದ್ಯಾರ್ಥಿಗಳಾದ ಕರಾವಳಿ ಕಾಲೇಜಿನ ಫಾರ್ಮಾ ಡಿ ವಿದ್ಯಾರ್ಥಿ ಕೇರಳದ ಕೊಚ್ಚಿನ್ನ ಅಡೋನ್ ದೇವ್, ಕೆಎಂಸಿಯ ಅಂತಿಮ ವರ್ಷದ ಪೆಥೊಲಜಿ ಎಂಡಿ ವಿದ್ಯಾರ್ಥಿ ತುಮಕೂರಿನ ಹರ್ಷ ಕುಮಾರ್ ಮತ್ತು ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ಕಸಬ ಬೆಂಗ್ರೆಯ ಮೊಹಮ್ಮದ್ ಅಫ್ರಾರ್ (23) ಬಂಧಿತರು. ಗಾಂಜಾ ಸೇವನೆ ಪ್ರಕರಣದಲ್ಲಿ ಇಬ್ಬರು ವೈದ್ಯರು ಸೇರಿ ಹತ್ತು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.
ಮಂಗಳೂರಿನಲ್ಲಿ ವಾಸವಿದ್ದ ಸಾಗರೋತ್ತರ ವಿದ್ಯಾರ್ಥಿ ಯುಕೆಯ ನೀಲ್ ಕಿಶೋರಿಲಾಲ್ ರಾಮ್ಜಿ ಶಾ (38), ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿರುವ ಕೇರಳದ ಡಾ.ಶಮೀರ್ (32), ಕೆಎಂಸಿ ಮಣಿಪಾಲದಲ್ಲಿ ಮೆಡಿಕಲ್ ಸರ್ಜನ್ ಆಗಿರುವ ತಮಿಳುನಾಡಿನ ಡಾ.ಮಣಿಮಾರನ್ ಮುತ್ತು (28), ಕೆಎಂಸಿ ಮಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಕೇರಳದ ಡಾ.ನಾದಿಯಾ ಸಿರಾಜ್ (24), ವಿದ್ಯಾರ್ಥಿನಿ ಆಂಧ್ರಪ್ರದೇಶದ ಡಾ.ವರ್ಷಿಣಿ ಪ್ರತಿ (26), ಕೆಎಂಸಿ ಮಂಗಳೂರಿನ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ ಚಂಢೀಗಡ ಪಂಜಾಬ್ನ ಡಾ.ರಿಯಾ ಚಡ್ಡ (22), ಕೆಎಂಸಿ ಮಂಗಳೂರಿನ ಮೂರನೇ ವರ್ಷದ ಎಂ.ಎಸ್.ಆರ್ಥೋ ವಿದ್ಯಾರ್ಥಿ ದೆಹಲಿಯ ಡಾ.ಕ್ಷಿತಿಜ್ ಗುಪ್ತ (25), ಕೆಎಂಸಿ ಮಂಗಳೂರಿನ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಪುಣೆಯ ಡಾ.ಇರಾ ಬಾಸಿನ್ (23), ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಮೂರನೇ ವರ್ಷದ ಎಂಡಿ ಪಿಸಿಯಾಟ್ರಿಕ್ ವಿದ್ಯಾರ್ಥಿನಿ ಪಂಜಾಬ್ ಚಂಢೀಗಡದ ಡಾ.ಭಾನು ದಾಹಿಯಾ (27) ಬಂಟ್ವಾಳ ತಾಲೂಕಿನ ಮೊಹಮ್ಮದ್ ರೌಫ್ ಯಾನೆ ಗೌಸ್ (34) ಅವರನ್ನು ಬಂಧಿಸಲಾಗಿತ್ತು.