ಉಳ್ಳಾಲ:ಕೊಣಾಜೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುವಾರದಿಂದ ಕಾಣೆಯಾಗಿದ್ದ ವೃದ್ಧನೋರ್ವ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಮಲಾರ್ ಅರಸ್ತಾನದ ಪಲ್ಲಿಯಬ್ಬ ಯಾನೆ ಪಲ್ಲಿಯಾಕ (70) ಎಂಬುವರನ್ನು ಗಾಂಜಾ ವ್ಯಸನಿಗಳ ತಂಡವೊಂದು ಕೊಂದು ಇರಾ ಸಮೀಪದ ಗುಡ್ಡವೊಂದರಲ್ಲಿ ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಮನೆ ಸಮೀಪದ ಇಬ್ಬರು ಯುವಕರು ಹೊರ ಊರಿನ ಕೆಲವು ಮಂದಿಯ ಸಹಕಾರದಿಂದ ಕೊಂದು ಹೂತಿದ್ದಾರೆ ಎನ್ನಲಾಗುತ್ತಿದೆ.
ಶುಕ್ರವಾರ ಮಧ್ಯಾಹ್ನದವರೆಗೂ ಇವರ ಮೊಬೈಲ್ ರಿಂಗ್ ಆಗುತ್ತಿದ್ದು, ಬಳಿಕ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡ ಪಲ್ಲಿಯಬ್ಬ ಅವರ ಸಂಬಂಧಿಕರು ಊರಿನ ಇಬ್ಬರು ಶಂಕಿತರನ್ನು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ.