ಬಂಟ್ವಾಳ(ದಕ್ಷಿಣ ಕನ್ನಡ): ರಾಜ್ಯ ರಸ್ತೆ ಸಾರಿಗೆ ನಿಗಮವೀಗ ಸಾರ್ವಜನಿಕರ ಆರೋಗ್ಯದ ಸುರಕ್ಷತೆಯತ್ತ ಗಮನ ಹರಿಸಿ, ಸಾರಿಗೆ ಸುರಕ್ಷಾ ಎಂಬ ಬಸ್ ಒದಗಿಸಿದೆ. ಐದು ಹಾಸಿಗೆಯುಳ್ಳ ಆ್ಯಂಬುಲೆನ್ಸ್ ಇದಾಗಿದ್ದು, ಪ್ರತಿಯೊಂದು ಬೆಡ್ಗೂ ಆಕ್ಸಿಜನ್ ವ್ಯವಸ್ಥೆ, ಬಿಪಿ, ಇಸಿಜಿ, ತಾಪಮಾನ ಪರೀಕ್ಷೆಯನ್ನು ನೋಡಿಕೊಳ್ಳುವುದು, ಐ.ವಿ. ವ್ಯವಸ್ಥೆ, ವೆಂಟಿಲೇಟರ್ ಅಳವಡಿಸಲು ಸೌಲಭ್ಯ, ತುರ್ತು ಔಷಧ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಇದರಲ್ಲಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಹಾಗೂ ಪುತ್ತೂರು ಕೆಎಸ್ಆರ್ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕೆಎಸ್ಆರ್ಟಿಸಿ ಐಸಿಯು ಬಸ್ ಬಂಟ್ವಾಳಕ್ಕೆ ಆಗಮಿಸಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜೂ. 17ರಂದು ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ಸು ನೀಡುವ ಕುರಿತು ಚರ್ಚಿಸಿದ್ದು, ಡಿಸಿಎಂ ಒಪ್ಪಿಗೆ ಸೂಚಿಸಿದ್ದರು. ಬಿ.ಸಿ. ರೋಡು ಕೆಎಸ್ಆರ್ಟಿಸಿ ಘಟಕದಲ್ಲಿ ಈಗಾಗಲೇ ಬಸ್ಸಿನ ವ್ಯವಸ್ಥೆಗಳ ಕುರಿತು ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿದ್ದು, ಎಲ್ಲಾ ಘಟಕಗಳು ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಿದೆ. ಆ್ಯಂಬುಲೆನ್ಸ್ ರೀತಿಯಲ್ಲೇ ಸೈರನ್ ವ್ಯವಸ್ಥೆಯನ್ನು ಬಸ್ಸು ಒಳಗೊಂಡಿದ್ದು, ಒಳಭಾಗಕ್ಕೆ ಹೊಕ್ಕರೆ ಮಿನಿ ಕ್ಲಿನಿಕ್ ರೀತಿಯ ವ್ಯವಸ್ಥೆ ಇರುತ್ತದೆ. ಹಿಂದಿನ ಭಾಗದಲ್ಲಿ ರೋಗಿಗಳು ಪ್ರವೇಶಿಸುವ ವ್ಯವಸ್ಥೆ ಇರುತ್ತದೆ. ನೋಟಿಸ್ ಬೋರ್ಡ್, ರೋಗಿಗಳ ಶೀಘ್ರ ಗುಣಮುಖರಾಗುವ ಕುರಿತು ಬರಹಗಳು ಕೂಡ ಇವೆ.