ಕಡಬ :ದಕ್ಷಿಣ ಕನ್ನಡ ಜಿಲ್ಲೆಯ ಕಡಬತಾಲೂಕಿನ ಕೋಣಾಜೆ ಗ್ರಾಮ ಪಂಚಾಯತ್ ಅಧೀನಕ್ಕೊಳಪಟ್ಟ 40 ಮನೆಗಳಿರುವ ಕಾಲೋನಿ ಜನ 2-3 ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು ದಿನ ಬೆಳಗಾದ್ರೆ ಇಲ್ಲಿನ ನಿವಾಸಿಗಳು ಕ್ಯಾನ್, ಬಿಂದಿಗೆ, ಬಕೆಟ್ ಹಿಡಿದುಕೊಂಡು ಅರ್ಧ ಕಿಲೋಮೀಟರ್ ದೂರದ ರಬ್ಬರ್ ತೋಟದೊಳಗೆ ಹರಿಯುವ ತೊರೆ ನೀರನ್ನು ಸಂಗ್ರಹಿಸುವಂತಾಗಿದೆ.
ಇಲ್ಲಿನ ಸಿಆರ್ಸಿ ಕಾಲೋನಿಯ ಜನರು ಕುಡಿಯುವ ನೀರುಗಾಗಿ ಹಾತೊರೆಯುವಂತಾಗಿದೆ. ಬೇಸಿಗೆ ಕಾಲ ಬಂದ್ರೆ ತೊರೆಯ ನೀರು ಸಹ ಬತ್ತಿ ಹೋಗುತ್ತದೆ. ಎರಡು ನೀರಿನ ಟ್ಯಾಂಕ್ಗಳಿದ್ದು, ನೀರು ತುಂಬಿಸುವ ವ್ಯವಸ್ಥೆಯಿಲ್ಲದೆ ಖಾಲಿಯಾಗಿ ಬಿದ್ದಿವೆ.
ಇದರಿಂದಾಗಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದ್ರೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.