ಕಡಬ/ದಕ್ಷಿಣ ಕನ್ನಡ:ಕರಾವಳಿಯಲ್ಲಿ ಮಳೆರಾಯನ ಅಬ್ಬರ ಆರಂಭವಾಗಿದೆಯಷ್ಟೇ. ಆದರೆ, ಮಳೆ ಶುರುವಾದದ್ದೇ ತಡ, ಕಡಬದ ಪ್ರಮುಖ ಸರಕಾರಿ ಕಾಲೇಜು ಸಂಪರ್ಕಿಸುವ ಅಡ್ಡಗದ್ದೆ ಪ್ರದೇಶದಲ್ಲಿ ಚರಂಡಿಗಳ ದುರಾವಸ್ತೆಯಿಂದ ಮಳೆನೀರು ಸಂಪೂರ್ಣವಾಗಿ ರಸ್ತೆಯಲ್ಲಿಯೇ ಹರಿಯುತ್ತಿದೆ.
ಮಳೆ ಆರಂಭವಾದ್ರೂ ದುರಸ್ತಿ ಕಾಣದ ಚರಂಡಿ: ಮುಖ್ಯ ರಸ್ತೆಯಲ್ಲೇ ಹರಿಯುತ್ತಿದೆ ನೀರು - Drainage problem in kadaba
ಮುಂಗಾರು ಮಳೆ ಆರಂಭವಾದ್ರೂ ಅಧಿಕಾರಿಗಳು ಚರಂಡಿ ದುರಸ್ತಿ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಕಡಬ ತಾಲೂಕಿನ ಹಲವು ರಸ್ತೆಗಳಲ್ಲಿ ಮಳೆ ನೀರು ಚರಂಡಿಯ ಕಲುಷಿತ ನೀರಿನೊಂದಿಗೆ ಸೇರಿ ರಸ್ತೆಯಲ್ಲೇ ಹರಿಯುತ್ತಿದ್ದು, ಜನಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
![ಮಳೆ ಆರಂಭವಾದ್ರೂ ದುರಸ್ತಿ ಕಾಣದ ಚರಂಡಿ: ಮುಖ್ಯ ರಸ್ತೆಯಲ್ಲೇ ಹರಿಯುತ್ತಿದೆ ನೀರು Drainage problem in kadaba](https://etvbharatimages.akamaized.net/etvbharat/prod-images/768-512-7733488-thumbnail-3x2-kadaba.jpg)
ಕಡಬ ಪರಿಸರದಲ್ಲಿ ಮಳೆಯ ಅಬ್ಬರಕ್ಕೆ ಹಲವು ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಕಾಂಕ್ರಿಟ್ ರಸ್ತೆಗಳು, ರಾಜ್ಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳ ಮೇಲೆಯೇ ಮಳೆನೀರು ಹರಿದು ಸ್ಥಳೀಯರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಮಳೆಗಾಲ ಆರಂಭವಾದರೂ ಸ್ಥಳೀಯ ಆಡಳಿತ ಸರಿಯಾದ ಕ್ರಮದಲ್ಲಿ ಚರಂಡಿ ನಿರ್ವಹಣೆ ಮಾಡದ ಕಾರಣ ಮಳೆನೀರು ಹರಿದು ಹೋಗಲು ತಡೆಯುಂಟಾಗಿ, ಕೆಲವು ಕಡೆ ರಸ್ತೆ ಪಕ್ಕದ ಮನೆಗಳ ಅಂಗಳಕ್ಕೆ ಅಷ್ಟೇ ಅಲ್ಲ ಕಡಬದ ಅಡ್ಡಗದ್ದೆಯ ಚರ್ಚ್ ಒಂದಕ್ಕೆ ಕೂಡ ಮಳೆ ನೀರು ನುಗ್ಗಿದೆ.
ಇನ್ನು ಸ್ಥಳೀಯರು ಪ್ರತಿ ಬಾರಿಯೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಾರಿಯಾದರೂ ಚರಂಡಿ ದುರಸ್ತಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.