ಬೆಳ್ತಂಗಡಿ (ದಕ್ಷಿಣ ಕನ್ನಡ): ಎಲೆಗಳ ಮೇಲೆ ಚಿತ್ರ ಮೂಡಿಸುವ ಲೀಫ್ ಆರ್ಟ್ ಕಲೆಯಲ್ಲಿ ಮೂಡುಬಿದಿರೆಯ ಅಕ್ಷಯ್ ಎಂ.ಕೋಟ್ಯಾನ್ ಸಾಧನೆ ಮಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆಯವರ ಚಿತ್ರವನ್ನು ಅಶ್ವತ್ಥ ಎಲೆಗಳಲ್ಲಿ ಮೂಡಿಸುವ ಮೂಲಕ ಡಾ. ಹೆಗ್ಗಡೆಯವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೂಲತಃ ಮೂಡುಬಿದಿರೆಯ ಕಲ್ಲಬೆಟ್ಟುವಿನ ಮೋಹನ್ ಬಿ. ಪೂಜಾರಿ ಹಾಗೂ ಶೋಭಾ ಕೋಟ್ಯಾನ್ ದಂಪತಿಯ ಪುತ್ರ ಅಕ್ಷಯ್, ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿವಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಗದದ ಮೂಲಕ ಚಿತ್ರ ಬಿಡಿಸುವುದನ್ನು ಆರಂಭಿಸಿದ ಇವರು, ಕಳೆದ ನಾಲ್ಕು ತಿಂಗಳುಗಳಿಂದ ಎಲೆಗಳ ಮೇಲೆ ಚಿತ್ರ ಮೂಡಿಸಿ (ಲೀಫ್ ಆರ್ಟ್) ಯಶಸ್ವಿಯಾಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಡಾ.ಡಿ. ವೀರೇಂದ್ರ ಹೆಗ್ಗಡೆ, ನಾರಾಯಣಗುರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಹಿತ ಇನ್ನೂ ಅನೇಕ ನಾಯಕರು, ಯಕ್ಷಗಾನ ಕಲಾವಿದರು, ಚಿತ್ರ ನಟರು ಹಾಗೂ ದೇವರ ಚಿತ್ರಗಳನ್ನು ಎಲೆಗಳಲ್ಲಿ ಮೂಡಿಸಿದ್ದಾರೆ.
ಬಹುಮುಖ ಪ್ರತಿಭೆ:ಅಕ್ಷಯ್ ಅವರು ಬಹುಮುಖ ಪ್ರತಿಭೆಯಾಗಿದ್ದು, ಪೆನ್ಸಿಲ್ ಮೊನೆಗಳಲ್ಲಿ ಆಕೃತಿ, ಸೋಪಿನಲ್ಲಿ ಆಕೃತಿ, ಸ್ಪೀಡ್ ಪೇಂಟಿಂಗ್, ರಂಗೋಲಿ, ಮರಳಿನಲ್ಲಿ ಆಕೃತಿ, ಡಿಜಿಟಲ್ ಪೇಂಟಿಂಗ್ ಮೊದಲಾದ ಅನೇಕ ಬಗೆಗಳ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ.