ಕರ್ನಾಟಕ

karnataka

ETV Bharat / state

ಒಂದು ವರ್ಷ ಶಾಲೆ ತೆರೆಯದಿದ್ದರೆ ಏನೂ ತೊಂದರೆ ಇಲ್ಲ: ಡಾ. ಕಲ್ಲಡ್ಕ ಪ್ರಭಾಕರ ಭಟ್ - ಡಾ.ಕಲ್ಲಡ್ಕ ಪ್ರಭಾಕರ ಭಟ್

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು, ಪ್ರಸಕ್ತ ಸನ್ನಿವೇಶ ಮತ್ತು ಶಾಲೆ ತೆರೆಯುವುದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಂದು ವರ್ಷ ನಷ್ಟವಾದರೆ, ಏನೂ ತೊಂದರೆ ಇಲ್ಲ, ನಮ್ಮ ಜೀವ ಉಳಿಯುತ್ತದೆ ಎಂದಿದ್ದಾರೆ.

Dr. Kalladka prabhakara bhat
Dr. Kalladka prabhakara bhat

By

Published : Jun 10, 2020, 6:18 PM IST

ಬಂಟ್ವಾಳ: ಒಂದು ವರ್ಷ ಶಾಲೆಗಳನ್ನು ಪ್ರಾರಂಭಿಸದಿದ್ದರೆ ಏನೂ ತೊಂದರೆ ಇಲ್ಲ. ಈ ಸಂಕಷ್ಟದ ಸ್ಥಿತಿಯಲ್ಲಿ ಫೀಸ್ ಗಳಿಗೆ ಪೋಷಕರ ಮೇಲೆ ಒತ್ತಡ ಹೇರುವುದು ಕೂಡಾ ಸರಿಯಲ್ಲ. ಅಂತಹ ಪ್ರಕರಣಗಳಿದ್ದಲ್ಲಿ, ಸರ್ಕಾರ ಕ್ರಮ ಕೈಗೊಳ್ಳುವ ಧೈರ್ಯ ತೋರಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಪ್ರಸಕ್ತ ಸನ್ನಿವೇಶಗಳ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಲ್ಲಡ್ಕ ಶಾಲೆಯ ಪೋಷಕರೇ ಈ ನಿರ್ಧಾರ ತಳೆದಿದ್ದಾರೆ. ಕೊರೊನಾ ವೈರಸ್ ಒಂದು ವರ್ಷದಲ್ಲಿ ಶಕ್ತಿ ಕಳೆದುಕೊಳ್ಳಲಿದ್ದು, ನಾವು ಕೂಡಾ ಆರೋಗ್ಯವಂತರಾಗಲಿದ್ದೇವೆ. ಆ ಸಂದರ್ಭ ಶಾಲೆಗೆ ತೆರಳಬಹುದು ಎಂದಿದ್ದಾರೆ.

ಒಂದು ವರ್ಷ ನಷ್ಟ ಎಂದು ಪೋಷಕರು, ಶಿಕ್ಷಣ ಸಂಸ್ಥೆಗಳು ಭಾವಿಸುವುದು ಬೇಡ. ಈ ಬಾರಿ ಶಿಕ್ಷಣ ಸಂಸ್ಥೆಗಳು ಪೋಷಕರ ಪರವಾಗಿ ನಿಂತು ಯೋಚನೆ ಮಾಡಬೇಕು. ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿದವರು ಪೋಷಕರು. ಪೋಷಕರಿಗೆ ಏನೇನು ಅನುಕೂಲತೆಗಳನ್ನು ಮಾಡಿಕೊಡಬಹುದು ಎಂಬುದನ್ನು ನೋಡಬೇಕು. ಕೊರೊನಾ ಸಂಕಷ್ಟಕ್ಕೆ ಎಲ್ಲರೂ ಪಾಲುದಾರರಾಗಬೇಕು, ಇದಕ್ಕೆ ಅಧ್ಯಾಪಕರು, ಪೋಷಕರು, ಮ್ಯಾನೇಜ್ಮೆಂಟ್ ಎಲ್ಲರೂ ಹೊಂದಿಕೊಳ್ಳಬೇಕು. ಸಂಕಷ್ಟವನ್ನು ಎಲ್ಲರೂ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅತಿಯಾದ ಸ್ಯಾನಿಟೈಸೇಶನ್ ಅಡ್ಡಪರಿಣಾಮ ಬೀರುವ ಸಾಧ್ಯತೆಯಿದೆ. ಕೆಮಿಕಲ್ ಅನ್ನು ಸಣ್ಣ ಮಕ್ಕಳ ದೇಹಕ್ಕೆ ಹಚ್ಚಬೇಕಾಗುತ್ತದೆ. ಮಳೆಗಾಲದಲ್ಲಿ ಶೀತ, ಕೆಮ್ಮು ಬರುವುದು ಸ್ವಾಭಾವಿಕ. ಒಂದು ಮಗು ಸೀನಿದರೂ ಅವನನ್ನು ಹೊರಗೆ ಹಾಕುವ ವಾತಾವರಣ ನಿರ್ಮಾಣವಾಗಬಹುದು. ಈ ಹಿನ್ನೆಲೆಯಲ್ಲಿ, ಒಂದು ವರ್ಷ ನಷ್ಟವಾದರೆ, ಏನೂ ತೊಂದರೆ ಇಲ್ಲ, ನಮ್ಮ ಜೀವ ಉಳಿಯುತ್ತದೆ ಎಂದು ಡಾ. ಭಟ್ ತಿಳಿಸಿದ್ದಾರೆ.

ABOUT THE AUTHOR

...view details