ಪುತ್ತೂರು/ದಕ್ಷಿಣ ಕನ್ನಡ: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಮತ್ತು ಸಿವಿಲ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ)ಯಿಂದ ಮಾನ್ಯತೆ ಲಭಿಸಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಸುಮಾರು 69 ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಸಮಾಜಮುಖಿ ಕೆಲಸದ ಜತೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅಲ್ಲದೆ ಸುಮಾರು 33 ಗ್ರಾಮಗಳನ್ನು ದತ್ತು ಪಡೆದು ವಿವಿಧ ರೀತಿಯ ಅಭಿವೃದ್ಧಿ ಜೊತೆಗೆ ಗ್ರಾಮ ವಿಕಾಸ ಮಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಡಾ.ಕಲ್ಲಡ್ಕ ಪ್ರಭಾಕರ ಭಟ್ ಸುದ್ದಿಗೋಷ್ಟಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜೊತೆಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಶಿಕ್ಷಣ ಸಂಸ್ಥೆಯು ನಿರ್ದಿಷ್ಟ ಗುಣಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎಂಬುದನ್ನು ವೃತ್ತಿಪರ ಪರಿಶೀಲನೆ ಆಧಾರದಲ್ಲಿ ಮೌಲ್ಯಮಾಪನ ಮಾಡುತ್ತದೆ. ಒಟ್ಟಾರೆಯಾಗಿ ಸಮಗ್ರ ಪರೀಕ್ಷೆಗೊಳಪಡಿಸಿ ಬಳಿಕ ಮಾನ್ಯತೆ ನೀಡುವ ಪ್ರಕ್ರಿಯೆ ನಡೆಸುತ್ತದೆ ಎಂದು ಪ್ರಭಾಕರ್ ತಿಳಿಸಿದ್ರು. ಈ ಮಾನ್ಯತೆಯಿಂದಾಗಿ ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಸಂಖ್ಯಾ ದೃಷ್ಟಿಯಿಂದ ದಾಖಲಾತಿ ಸುಧಾರಿಸುತ್ತದೆ. ವಿವಿಧ ಮೂಲಗಳಿಂದ ಆದಾಯ ಗಳಿಸಿಕೊಳ್ಳಲು ಸಹಕಾರಿಯಾಗುತ್ತದೆ, ಪದವೀಧರರ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಬಹುರಾಷ್ಟ್ರೀಯವಾಗಿ ಗುರುತಿಸಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ ಎಂದು ಹೇಳಿದ್ರು.
ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿನಿ ಸಿಂಧೂರ ಸರಸ್ವತಿ ಬಿ. ಪ್ರಥಮ ರ್ಯಾಂಕ್ ಹಾಗೂ ಆರು ಚಿನ್ನದ ಪದಕಗಳನ್ನು ಪಡೆದಿದ್ದು, ಅವರಿಗೆ ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳ ವತಿಯಿಂದ ಅಭಿನಂದನೆ ಸಲ್ಲಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ಪ್ರಿನ್ಸಿಪಾಲ್ ಡಾ.ಎಂ.ಎಸ್.ಗೋವಿಂದೇಗೌಡ, ನಿರ್ದೇಶಕ ರವಿಕೃಷ್ಣ ಕಲ್ಲಾಜೆ ಉಪಸ್ಥಿತರಿದ್ದರು.