ಬೆಳ್ತಂಗಡಿ (ದಕ್ಷಿಣ ಕನ್ನಡ): ಡ್ರೋನ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಕುರಿತ ಪ್ರಾತ್ಯಕ್ಷಿಕೆ ಗುರುವಾರ ಧರ್ಮಸ್ಥಳದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
ಸ್ಯಾನಿಟೈಸರ್ ಸಿಂಪಡಣೆಯ ಪ್ರಾತ್ಯಕ್ಷಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು. ಡಾ.ಎ.ಪಿ.ಜೆ.ಕಲಾಂ ಶಿಷ್ಯರಾದ ಚೆನ್ನೈನ ಡಾ.ಕಾರ್ತಿಕ್ ನಾರಾಯಣ್ ಮತ್ತು ಅಣ್ಣಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಸೆಂಥಿಲ್ ಕುಮಾರ್ ನೇತೃತ್ವದ ಸುಗಾರಾಧನಾ ತಂಡದವರು ಕೊರೊನಾ ಸೋಂಕು ತಡೆಗಟ್ಟಲು ಹೊಸ ಸ್ಯಾನಿಟೈಸರ್ ಆವಿಷ್ಕರಿಸಿದ್ದಾರೆ.
ಕರ್ನಾಟಕದ ಸುಮಾರು ಒಂದು ಸಾವಿರ ಗ್ರಾಮಗಳನ್ನು ದತ್ತು ತೆಗೆದುಕೊಂಡು, ಒಂದು ಸಾವಿರ ಯುವಜನರಿಗೆ ಗ್ರಾಮೀಣಾಭಿವೃದ್ಧಿ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಗೆ ಸುಗಾರಾಧನಾ ತಂಡದ ಅಶ್ರಯದಲ್ಲಿ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಚೆನ್ನೈನಲ್ಲಿರುವ ಅಣ್ಣಾ ವಿಶ್ವವಿದ್ಯಾಲಯದ ಎಂ.ಐ.ಟಿ.ಯಲ್ಲಿ ನಿರ್ಮಿಸಲಾದ ಬ್ಯಾಟರಿಚಾಲಿತ ಡ್ರೋನ್ ಬಳಸಿ, ಯಾವುದೇ ಕಟ್ಟಡದ ಹೊರ ಅವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬಹುದು. ಈ ಡ್ರೋನ್ 16 ಲೀಟರ್ ಸಾಮರ್ಥ್ಯದ ಔಷಧದ ಟ್ಯಾಂಕ್ ಹೊಂದಿದ್ದು, ಐದು ಗಂಟೆಗಳ ಕಾಲ ಬಳಸಬಹುದಾಗಿದೆ. ಈ ಯೋಜನೆಯ ಕಲ್ಪನೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಕನಸಿನ ಕೂಸಾಗಿದ್ದು, ಚೆನ್ನೈ, ಬೆಂಗಳೂರು, ತಮಿಳುನಾಡಿನಲ್ಲಿ ಈಗಾಗಲೇ ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ಬಳಕೆ ಮಾಡಲಾಗಿದೆ.
ಈ ಡ್ರೋನ್ ಮೂಲಕ ಸ್ಯಾನಿಟೈಸರ್ ಸಿಂಪಡಿಸಿದ ಪ್ರದೇಶಗಳಲ್ಲಿ ಕೊರೊನಾ ಸೋಂಕು ಸಂಪೂರ್ಣ ನಿವಾರಣೆಯಾಗಿದೆ. ಅಲ್ಲದೇ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಮಿಳುನಾಡು ಸರ್ಕಾರದ ಆರೋಗ್ಯ ಇಲಾಖೆ ದೃಢೀಕರಣ ಪತ್ರ ನೀಡಿದೆ ಎಂದು ಡಾ.ಕಾರ್ತಿಕ್ ನಾರಾಯಣ್ ಮಾಹಿತಿ ನೀಡಿದ್ರು.