ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಜರುಗಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಎನ್‌ಆರ್‌ಐ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅಕ್ಟೋಬರ್ 17 ರಂದು ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡಲಿದ್ದಾರೆ.
ನಾಳೆ ಮಂಗಳೂರು ದಸರಾಕ್ಕೆ ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಚಾಲನೆ - ಎನ್‌ಆರ್‌ಐ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ
ಮಂಗಳೂರು ದಸರಾ ಮಹೋತ್ಸವವು ‘ನಮ್ಮ ದಸರಾ - ನಮ್ಮ ಸುರಕ್ಷೆ’ ಎಂಬ ಘೋಷ ವಾಕ್ಯದಡಿ ನಡೆಯಲಿದ್ದು, ಕೋವಿಡ್-19 ವಾರಿಯರ್ ಆಗಿ ಶ್ರಮಿಸಿದ ಡಾ. ಆರತಿಕೃಷ್ಣ ಅವರು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಶ್ರೀ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು ದಸರಾ ಮಹೋತ್ಸವವು ‘ನಮ್ಮ ದಸರಾ - ನಮ್ಮ ಸುರಕ್ಷೆ’ ಘೋಷ ವಾಕ್ಯದಡಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ವಾರಿಯರ್ ಆಗಿ ಶ್ರಮಿಸಿದ ಡಾ. ಆರತಿಕೃಷ್ಣ ಅವರನ್ನು ಮಂಗಳೂರು ದಸರಾ ಮಹೋತ್ಸದ ಚಾಲನೆಗೆ ಆಮಂತ್ರಿಸಲಾಗಿದೆ.
ಡಾ. ಆರತಿಕೃಷ್ಣ ಅವರು ಕೋವಿಡ್ ಸಂಕಷ್ಟ ಕಾಲದಲ್ಲಿ ಅನಿವಾಸಿ ಭಾರತೀಯರು ಯಾರೇ ಸಂಕಷ್ಟಕ್ಕೀಡಾಗಿದ್ದರು ಕೂಡ ಕೂಡಲೇ ಸ್ಪಂದಿಸಿ ಪರಿಹಾರ ಒದಗಿಸಿದ್ದಾರೆ. 6 ತಿಂಗಳಿನಲ್ಲಿ 40ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎನ್‌ಆರ್‌ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಬಹಳಷ್ಟು ಶ್ರಮಿಸಿದ್ದಾರೆ.