ಕಡಬ(ದಕ್ಷಿಣ ಕನ್ನಡ):ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗಂಡು ಮಗುವಿನ ಜನನಕ್ಕೆ ಕಾರಣನಾಗಿದ್ದಲ್ಲದೆ, ಬಳಿಕ ಮಗು ತನ್ನದಲ್ಲ ಎಂದು ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆರೋಪದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ತನಗೆ ನಂಬಿಸಿದ ಯುವಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಗಂಡು ಮಗು ಜನಿಸಿದ್ದು, ಆದರೆ ಬಳಿಕ ಮಗು ತನ್ನದಲ್ಲ ಎಂದು ತನ್ನ ಶೀಲದ ಮೇಲೆ ಅನುಮಾನಪಟ್ಟಿದ್ದಾನೆ ಎಂದು ಯುವಕನ ವಿರುದ್ಧ ಯುವತಿಯು ವರದಕ್ಷಿಣೆ ಕಿರುಕುಳ, ನಿಂದನೆ ಆರೋಪ ಹೊರಿಸಿ ದೂರು ನೀಡಿದ್ದಾಳೆ. ದೀಕ್ಷಿತ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿಗೆ ಸಂಬಂಧಿಯೂ ಆದ ಆರೋಪಿ ದೀಕ್ಷಿತ್, ಆಗಾಗ ಆಕೆಯ ಮನೆಗೆ ಬರುತ್ತಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಬಳಿಕ ಆರೋಪಿಯು ಕೆಲಸದ ನಿಮಿತ್ತ ದೂರದೂರಿಗೆ ತೆರಳಿದ್ದ. ಕೆಲ ತಿಂಗಳ ನಂತರ ಯುವತಿಗೆ ತಾನು ಗರ್ಭವತಿಯಾಗಿರುವುದು ತಿಳಿದಿದ್ದು, ಆಕೆಯು ಇಬ್ಬರ ಮನೆಯವರಿಗೂ ಈ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಮನೆಯವರು ವಿವಾಹ ಮಾಡಲು ನಿರ್ಧರಿಸಿದ್ದರು.