ಕರ್ನಾಟಕ

karnataka

By

Published : Jun 4, 2020, 7:49 PM IST

ETV Bharat / state

ತರಾತುರಿಯಲ್ಲಿ ಸರ್ಕಾರಿ ಶಾಲೆ ಆರಂಭ ಬೇಡ: ಕೋಟಾ ಶ್ರೀನಿವಾಸ ಪೂಜಾರಿಗೆ ಮನವಿ

ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಸರ್ಕಾರಿ ಶಾಲಾ ಉಳಿಸಿ ಬೆಳೆಸಿ ರಾಜ್ಯ ಸಮಿತಿಯಿಂದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ.

Kota srinivasa poojari
Kota srinivasa poojari

ಬಂಟ್ವಾಳ:ಶಾಲೆಗಳನ್ನು ಆರಂಭಿಸುವ ಸರ್ಕಾರದ ನಿರ್ಧಾರದ ಬಗ್ಗೆ ಮಹತ್ವದ ಸಲಹೆಗಳ ಮನವಿಯನ್ನು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಬಂಟ್ವಾಳದ ನಿರೀಕ್ಷಣಾ ಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿದ ಪ್ರಕಾಶ್ ಅಂಚನ್, ಕೆಲ ಹೊತ್ತು ಈ ಬಗ್ಗೆ ಚರ್ಚೆ ನಡೆಸಿ ಮನವಿ ಸಲ್ಲಿಸಿದರು. ಕೊರೊನಾ ಜೊತೆ ಜೊತೆಗೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ. ಆದರೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗಿರುವುದರಿಂದ ತರಾತುರಿ ಮಾಡದೆ ಆಗಸ್ಟ್ ತಿಂಗಳಿನಲ್ಲಿ ಶಾಲೆ ಪುನಾರಂಭಿಸಲು ವಿದ್ಯಾರ್ಥಿಗಳ ಪೋಷಕರು ಉತ್ಸುಕತೆ ತೋರಿರುವುದಾಗಿ ಸಚಿವರಿಗೆ ಮನವರಿಕೆ ಮಾಡಿದರು.

ಸರ್ಕಾರವು ಸೂಕ್ತ ಸಮಯದಲ್ಲಿ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಗೆ ಸಂಬಂಧಿಸಿದಂತೆ ಇಲಾಖೆಗೆ ಸೂಚನೆ ನೀಡಿ ಶಾಲಾ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ತಯಾರಿಗೊಳಿಸಲು ಬೋಧನೆಗೆ ಅಡಚಣೆಯಾಗದಂತೆ ಶಿಕ್ಷಕರಿಗೆ ನೀಡುವ ಎಲ್ಲಾ ತರಬೇತಿಗಳನ್ನು ಈಗಿನ ಲಾಕ್​ಡೌನ್​ ರಜಾ ಅವಧಿಯಲ್ಲಿಯೇ ನೀಡಬೇಕು. ಗ್ರಾಮೀಣ ಭಾಗದ ಪ್ರದೇಶದಲ್ಲಿ ನೆಟ್​ವರ್ಕ್​ ಸಮಸ್ಯೆ ಇರುವುದರಿಂದ ಆನ್​ಲೈನ್​ ಶಿಕ್ಷಣವನ್ನು ಬಹಳಷ್ಟು ಬಡ ವಿದ್ಯಾರ್ಥಿಗಳಿಗೆ ತಲುಪಿಸಲು ಅಸಾಧ್ಯ. ಆದ್ದರಿಂದ ಮುಂಜಾನೆ ತರಗತಿ ಆರಂಭಿಸುವ ಬದಲು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಒಂದು ದಿನ, ಎರಡನೇ ದಿನದಲ್ಲಿ ಐದರಿಂದ ಏಳನೇ ತರಗತಿಗೆ ಶಾಲೆ ನಡೆಸಲು ಅವಕಾಶ ನೀಡಿದರೆ ಪ್ರಯೋಜನಕಾರಿಯಾಗಲಿದೆ.

ಸರ್ಕಾರದ ಪ್ರಸ್ತುತ ತೀರ್ಮಾನದಂತೆ ಬೆಳಿಗ್ಗೆ 7 ಗಂಟೆಯಿಂದ ತರಗತಿ ಆರಂಭಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಮೂರು ನಾಲ್ಕು ಕಿ.ಮೀ. ನಡೆದು ಬರುವ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಕಷ್ಟವಾಗಲಿದೆ. ಕೆಲೆವೆಡೆ ಶಾಲೆಗೆ ಶಿಕ್ಷಕರೇ ಬೆಳಿಗ್ಗೆ 9:30ಕ್ಕೆ ಬರಲು ಒದ್ದಾಟ ನಡೆಸುತ್ತಾರೆ. ಬೆಳಿಗ್ಗೆ 7 ಗಂಟೆಗೆ ಬರಬೇಕೆಂದರೆ ಅದು ನಿಷ್ಪ್ರಯೋಜಕವಾಗಬಹುದು. ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರುವಾಗ ನಗರ ಪ್ರದೇಶವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ ಗ್ರಾಮೀಣ ಪ್ರದೇಶದ ಮಕ್ಕಳ ಬಗ್ಗೆಯೂ ಕಾಳಜಿ ವಹಿಸಿ ವ್ಯವಸ್ಥೆ ಕಲ್ಪಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವಂತೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details