ಪುತ್ತೂರು: ಕೇವಲ ವಾರ್ಡ್ ಮಟ್ಟದಲ್ಲಿ ಕಾರ್ಯಪಡೆ ಮೀಟಿಂಗ್ ನಡೆಸಿದರೆ ಸಾಲದು. ಈ ಮೀಟಿಂಗ್‌ಗಳು ಕೇವಲ ಕೆಲಸದ ಪ್ರಗತಿ ಪರಿಶೀಲನೆ ಮಾಡಲು ಮಾತ್ರ ಸಹಕಾರಿ. ಕಾರ್ಯಪಡೆಯ ಸದಸ್ಯರು ಸಂಘ ಸಂಸ್ಥೆಗಳ ನೆರವು ಪಡೆದುಕೊಂಡು ಪ್ರತಿ ಮನೆಯನ್ನೂ ಭೇಟಿ ಮಾಡಿ ಅಧ್ಯಯನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಗುರುವಾರ ಪುತ್ತೂರು ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭಾ ವ್ಯಾಪ್ತಿಯ ಕೋವಿಡ್ ನಿಯಂತ್ರಣ ಕಾರ್ಯಾಚರಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನಗರಸಭೆಯ 31 ವಾರ್ಡ್ಗಳಲ್ಲಿ ಎಲ್ಲ ಕಡೆ ಕಾರ್ಯಪಡೆ ಮೀಟಿಂಗ್ ನಡೆಸಲಾಗುತ್ತಿದೆ ಎಂದು ಪೌರಾಯುಕ್ತರಾದ ರೂಪಾ ಶೆಟ್ಟಿ ಮಾಹಿತಿ ನೀಡಿದಾಗ ಪ್ರತಿಕ್ರಿಯಿಸಿದ ಸಚಿವರು, ಮೀಟಿಂಗ್ ನಡೆಸುವುದು ಉತ್ತಮ. ಆದರೆ, ಕೇವಲ ಮೀಟಿಂಗ್‌ಗೆ ಸೀಮಿತವಾದರೆ ಏನೂ ಪ್ರಯೋಜನವಿಲ್ಲ. ಟೀಂ ವರ್ಕ್ ಮಾಡಬೇಕು. ಹೇಗೆ ಚುನಾವಣೆ ಸಂದರ್ಭ ಪ್ರತೀ ಮನೆಗೂ ಭೇಟಿ ನೀಡಲಾಗುತ್ತದೆಯೋ, ಅದೇ ರೀತಿ ಈ ಬಾರಿ ನಗರಸಭಾ ವ್ಯಾಪ್ತಿಯ ಎಲ್ಲ ಮನೆಗಳಿಗೂ ತಂಡ ಭೇಟಿ ನೀಡಿ, ಮನೆ ಮುಂದೆ ನಿಂತು ಅಲ್ಲಿ ಸ್ಥಿತಿಗತಿ ಅಧ್ಯಯನ ಮಾಡಬೇಕು ಎಂದರು.
ಸೋಂಕಿತರು, ಪ್ರಾಥಮಿಕ ಸಂಪರ್ಕಿತರು, ಕ್ವಾರಂಟೈನ್ ನಿಯಮ ಪಾಲನೆ ಇತ್ಯಾದಿಗಳ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಬೇಕು. ಪಾಸಿಟಿವ್ ಬಂದ ನಂತರ ನೋಡಿಕೊಳ್ಳೋಣ ಎಂಬ ಧೋರಣೆ ಬೇಡ ಅಥವಾ ಇದು ಕೇವಲ ಆರೋಗ್ಯ ಇಲಾಖೆಯ ಕಾರ್ಯಕ್ರಮ ಎಂಬ ನಿರ್ಲಕ್ಷವೂ ಬೇಡ. ಇದು ಇಡೀ ಸರ್ಕಾರದ ಅಭಿಯಾನ. ಕೊರೊನಾ ನಿರ್ಮೂಲನೆ ಮಾಡಿ ಬಿಡುತ್ತೇವೆ ಎಂಬ ಆತುರ ಬೇಕಾಗಿಲ್ಲ. ಆದರೆ, ನಿಯಂತ್ರಣವಂತೂ ಮಾಡಲೇಬೇಕು ಎಂದು ಸೂಚಿಸಿದರು.