ಬೆಳ್ತಂಗಡಿ:ದ್ವೇಷ, ಮತ್ಸರ, ಅಪನಂಬಿಕೆಯಿಂದ ದೂರವಿದ್ದು ಅಷ್ಟಮಧಗಳನ್ನು ಬಿಟ್ಟು ಹೊರಬಂದಾಗ ಜೀವನ ಸಾರ್ಥಕ. ನಮ್ಮ ಬದುಕನ್ನು ಇನ್ನೊಬ್ಬರ ಬದುಕಿನ ಜೊತೆ ತುಲನೆ ಮಾಡಬೇಡಿ. ಇದರಿಂದ ಮಾನಸಿಕ ನೆಮ್ಮದಿ ಸಿಗಲು ಸಾಧ್ಯವಿಲ್ಲ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಗುರುವಾರ ಕನ್ಯಾಡಿ ಶ್ರೀ ದೇವರಗುಡ್ಡ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪ ಹಾಗೂ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಪ್ರಯುಕ್ತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಸುಖ, ಶಾಂತಿ, ನೆಮ್ಮದಿಯನ್ನು ಭಗವಂತ ಎಲ್ಲರಿಗೂ ನೀಡುತ್ತಾನೆ. ಆದರೆ ಅದನ್ನು ಅನುಭವಿಸುವ ಮಾರ್ಗಗಳು ವಿಭಿನ್ನವಾಗಿದೆ. ಕೇವಲ ಇಂದ್ರೀಯಗಳ ಸುಖ ಶಾಶ್ವತ ಎಂಬ ಭ್ರಮೆಯನ್ನು ಹಲವು ಮಂದಿ ಇಟ್ಟುಕೊಳ್ಳುತ್ತಾರೆ. ಇದು ತಪ್ಪು. ಬಾಹ್ಯ ಧರ್ಮಕ್ಕಿಂತ ಆಂತರಿಕ ಕ್ರಿಯೆ ಪ್ರಾಮಾಣಿಕವಾಗಿರಬೇಕು ಎಂದರು.
ಉತ್ತಮ ಸಮಾಜ ನಿರ್ಮಾಣವಾಗಲು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಬೇಕು. ಅಂತಹ ಸಂಸ್ಕಾರವನ್ನು ನೀಡಬೇಕಾದರೆ ಪ್ರತಿಯೊಬ್ಬರೂ ರಾಮನ ಜಪ ಮಾಡಿದಾಗ ಸಂಸ್ಕಾರ ಸಿಗಲು ಸಾಧ್ಯ ಎಂದರು.