ಕರ್ನಾಟಕ

karnataka

By

Published : Jun 24, 2020, 5:37 PM IST

ETV Bharat / state

ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಭಯ ಬೇಡ: ಖಾದರ್​​

ಕೋವಿಡ್ ಸೋಂಕಿತರ ಬಗ್ಗೆ ಜನರು ಎಷ್ಟೊಂದು ಮಾನಸಿಕವಾಗಿ ಭಯಭೀತರಾಗಿದ್ದಾರೆಂದರೆ ಹೆತ್ತವರ ಅಂತ್ಯ ಸಂಸ್ಕಾರ ನಡೆಸಲು ಹೆದರಿ ಮಕ್ಕಳು ಅವರ ಮೃತದೇಹವನ್ನು ಆರೋಗ್ಯ ಇಲಾಖೆಗೆ ಒಪ್ಪಿಸುತ್ತಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಯು.ಟಿ.ಖಾದರ್
ಯು.ಟಿ.ಖಾದರ್

ಮಂಗಳೂರು: ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೆ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದು ತಪ್ಪು. ಆದರೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ದೇಹದಿಂದ ಸೋಂಕು ಹರಡುವುದಿಲ್ಲ. ಈ ಬಗ್ಗೆ ವೈದ್ಯಕೀಯ ಅಧ್ಯಯನವೂ ಸ್ಪಷ್ಟನೆ ನೀಡಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಯು.ಟಿ.ಖಾದರ್, ಮಾಜಿ ಸಚಿವ

ನಿನ್ನೆ ಮಂಗಳೂರಿನ ಬೋಳೂರಿನ ದಹನ ಭೂಮಿಯಲ್ಲಿ ಕೋವಿಡ್ ಸೋಂಕಿತನ ಅಂತ್ಯ ಸಂಸ್ಕಾರ ನಡೆಯುವಲ್ಲಿ ಪಿಪಿಇ ಕಿಟ್ ಧರಿಸದೆ ಭಾಗವಹಿಸಿ, ಗುಂಡಿ ತೋಡಿರುವ ಬಗ್ಗೆ ಸ್ಪಷ್ಟನೆ ನೀಡಿದ ಯು.ಟಿ.ಖಾದರ್, ಕೋವಿಡ್ ಸೋಂಕಿತರ ಬಗ್ಗೆ ಜನರು ಎಷ್ಟೊಂದು ಮಾನಸಿಕವಾಗಿ ಭಯಭೀತರಾಗಿದ್ದಾರೆಂದರೆ ಹೆತ್ತವರ ಅಂತ್ಯ ಸಂಸ್ಕಾರ ನಡೆಸಲು ಹೆದರಿ ಮಕ್ಕಳು ಅವರ ಮೃತದೇಹವನ್ನು ಆರೋಗ್ಯ ಇಲಾಖೆಗೆ ಒಪ್ಪಿಸುತ್ತಾರೆ ಎಂದರು.

ನಿಜವಾಗಿಯೂ ಯಾರೇ ಕೊರೊನಾದಿಂದ ಮೃತಪಟ್ಟರೂ ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನಗಳಿಂದ ಅಂತ್ಯ ಸಂಸ್ಕಾರ ನಡೆಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಜನರಲ್ಲಿ ಇರುವ ಭೀತಿಯನ್ನು ಹೋಗಲಾಡಿಸಲು ಈ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದೆ. ಮುಂಜಾಗ್ರತೆ ವಹಿಸಬೇಕು ನಿಜ. ಆದರೆ ಅಂತ್ಯ ಸಂಸ್ಕಾರದ ವೇಳೆ ಪಿಪಿಇ ಕಿಟ್ ಧರಿಸಿಯಾದರೂ ನಿಲ್ಲಬಹುದಲ್ಲಾ? ಮೃತದೇಹದಿಂದ ಸೋಂಕು ಹರಡುತ್ತದೆ ಎಂದು ಯಾವ ವೈದ್ಯಕೀಯ ಅಧ್ಯಯನವೂ ತಿಳಿಸಿಲ್ಲ. ಸೋಂಕಿನಿಂದ ಮೃತಪಟ್ಟ ಮೃತದೇಹ ಆಸ್ಪತ್ರೆಯಿಂದ ಸರಿಯಾಗಿ ಬಂದೋಬಸ್ತಿನಿಂದ ಮುಚ್ಚಿ ಬರುತ್ತದೆ. ಸಂಬಂಧಿಕರಲ್ಲದ ಯಾರೋ ಆ್ಯಂಬುಲೆನ್ಸ್​​ನಲ್ಲಿ ತರುತ್ತಾರೆ. ಆದರೆ ಕೇವಲ ಅರ್ಧ ಗಂಟೆ ಇರುವ ಧಾರ್ಮಿಕ ವಿಧಿ ವಿಧಾನ ನಡೆಸಲು‌ ನಮಗೆ ಹೆದರಿಕೆ ಯಾಕೆ ಎಂದು ಪ್ರಶ್ನಿಸಿದರು.

ಆದ್ದರಿಂದ ಯಾರೇ ಕೋವಿಡ್ ಸೋಂಕಿನಿಂದ ಮೃತಪಟ್ಟರೂ ಮುಂಜಾಗ್ರತಾ ಕ್ರಮ ವಹಿಸಿ ಹೆತ್ತವರು, ಮಕ್ಕಳು, ಕುಟುಂಬಸ್ಥರು ಅಂತ್ಯ ಸಂಸ್ಕಾರವನ್ನು ನಿಮ್ಮದೇ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಮಾಡಲು ಏನೂ ತೊಂದರೆಯಿಲ್ಲ. ಇಂತಹ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಲಿ ಎಂದು ಯು.ಟಿ.ಖಾದರ್ ಹೇಳಿದರು.

ABOUT THE AUTHOR

...view details