ಕಡಬ(ದಕ್ಷಿಣ ಕನ್ನಡ):ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಒತ್ತಡಕ್ಕೊಳಗಾಗಿ ಕುಸಿದುಬಿದ್ದ ವೈದ್ಯಾಧಿಕಾರಿಯೊಬ್ಬರಿಗೆ ಗರ್ಭಪಾತವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪೊಲೀಸರಿಗೆ ದೂರು ನೀಡಿದೆ. ಕಡಬ ತಾಲೂಕಿನ ಗೊಳಿತ್ತೊಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಸಮರ್ಪಕ ಸ್ಪಷ್ಟನೆ ನೀಡಿದರೂ, ಮತ್ತೆ ಮತ್ತೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ವಿಚಲಿತರಾದ ಮಹಿಳಾ ವೈದ್ಯಾಧಿಕಾರಿಯೊಬ್ಬರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಎಂಬಲ್ಲಿ ನಡೆದಿತ್ತು.
ಸಭೆಯಲ್ಲಿ ನಡೆದಿದ್ದೇನು?:ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಗ್ರಾಮ ಸಭೆ ನಡೆದಿತ್ತು. ಈ ವೇಳೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಶಿಶಿರಾ ಅವರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಾಧಿಕಾರಿಗಳ ಬಳಿ ಏಪ್ರಿಲ್ ತಿಂಗಳಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ಮಮತಾ ಅವರ ಸಾವಿನ ಬಗ್ಗೆ ಗ್ರಾಮಸ್ಥರೊಬ್ಬರು ಪ್ರಶ್ನೆ ಮಾಡಿದ್ದರು. ಇದಕ್ಕೆ ವೈದ್ಯಾಧಿಕಾರಿಗಳು ಉತ್ತರ ಕೂಡಾ ನೀಡಿದ್ದರು. ಆದರೂ ಪಟ್ಟು ಬಿಡದ ಗ್ರಾಮಸ್ಥರು ಸ್ಪಷ್ಟ ಕಾರಣಕ್ಕಾಗಿ ಒತ್ತಾಯಿಸಿದ್ದರಿಂದ ಅವರು ಒತ್ತಡಕ್ಕೆ ಒಳಗಾದರು ಎನ್ನಲಾಗಿದೆ.
ವೈದ್ಯರ ಸಮಜಾಯಿಷಿಗೆ ಒಪ್ಪದ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿ ಶಿಶಿರಾ ಅವರು ಟೇಬಲ್ ಮೇಲಿದ್ದ ಒಂದು ಲೋಟ ನೀರು ಕುಡಿದು ಸಭಾಂಗಣದಿಂದ ಹೊರ ನಡೆದರು. ಗ್ರಾ.ಪಂ. ಕೊಠಡಿಯೊಳಗೆ ನೆಲದ ಮೇಲೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.