ಮಂಗಳೂರು: ಜಿಲ್ಲೆಯ ಬೆಳ್ತಂಗಡಿ ತಾಲೂಕು ಗೋವಿಂದೂರಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಕಷ್ಟಕ್ಕೆ ಸಿಲುಕಿರುವ ಗೋವಿಂದೂರಿನ ರವೂಫ್ ಪ್ರತಿಕ್ರಿಯಿಸಿದ್ದು, ಟಿಆರ್ಪಿ ಹೆಚ್ಚಿಸಲು ನಮ್ಮನ್ನು ಬಲಿಪಶು ಮಾಡಬೇಡಿ ಎಂದು ಮಾಧ್ಯಮದವರೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಂದ ಹಿನ್ನೆಲೆ ಮಂಗಳೂರಿನಲ್ಲಿ ಮಾತನಾಡಿದ ರವೂಫ್, ಅವರು ಈ ಅಳಲು ತೋಡಿ ಕೊಂಡಿದ್ದಾರೆ. ನಾನೊಬ್ಬ ಭಾರತೀಯ, ನಾನು ಭಾರತವನ್ನು ಪ್ರೀತಿಸುತ್ತೇನೆ. ಭಾರತೀಯತೆ ನನ್ನ ರಕ್ತದಲ್ಲಿದೆ. ಆದರೆ, ಮಾಧ್ಯಮಗಳು ನನ್ನನ್ನು ಪಾಕಿಸ್ತಾನಕ್ಕೆ ಸ್ಯಾಟ್ಲೈಟ್ ಪೋನ್ ಕರೆ ಮಾಡಿದ್ದೇನೆ. ನನ್ನನ್ನು ಬಂಧಿಸಲಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ಇದರಿಂದಾಗಿ ನನ್ನ ಮಾನಸಿಕ ನೆಮ್ಮದಿ ಹಾಳಾಗಿದ್ದು, ಎಲ್ಲರೂ ಪೋನ್ ಮಾಡಿ ವಿಚಾರಿಸುತ್ತಿದ್ದಾರೆ. ಈ ಸುದ್ದಿ ತಿಳಿದು ನನ್ನ ತಾಯಿ ಮೂರ್ಚೆ ಹೋದರು. ಇಂತಹ ಪರಿಸ್ಥಿತಿ ಯಾವುದೇ ಹಿಂದೂ, ಮುಸ್ಲಿಂ ಸಹೋದರರಿಗೂ ಬರಬಾರದು ಎಂದರು.
ನಮ್ಮನ್ನು ಬಲಿಪಶು ಮಾಡಬೇಡಿ ರವೂಫ್ ಅಳಲು 23 ವರ್ಷಗಳ ಹಿಂದೆ ತಂದೆ ತೀರಿ ಹೋದ ಬಳಿಕ ನಾನು ಮಂಗಳೂರು ಸಮೀಪದ ಅಲ್ ಮದೀನ ಸಂಸ್ಥೆಯಲ್ಲಿ ಗುರುಗಳೊಂದಿಗೆ ಇದ್ದೆ. ಮಾಧ್ಯಮದವರು ಊರಿನಲ್ಲಿ ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಮಾಧ್ಯಮದವರು ಮೂಲಗಳಿಂದ ಮಾಹಿತಿ ದೊರೆತಿದೆ ಎನ್ನುತ್ತಿದ್ದಾರೆ. ಅವರು ಆ ಮೂಲವನ್ನು ಹುಡುಕಿ ಕೊಡುವ ಮೂಲಕ ನನ್ನ ಸಂಕಷ್ಟಕ್ಕೆ ಪರಿಹಾರ ಮಾಡಿ ಕೋಡಬೇಕು. ಈ ಬಗ್ಗೆ ದ.ಕ ಜಿಲ್ಲಾ ಎಸ್.ಪಿ ಯವರಿಗೆ ದೂರು ನೀಡಿದ್ದೇನೆ ಎಂದರು.
ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ, ಈ ವಿಚಾರದಲ್ಲಿ ಎನ್ಐಎದಂತಹ ದೇಶದ ದೊಡ್ಡ ಮತ್ತು ಗೌರವಯುತ ಸಂಸ್ಥೆ ಹೆಸರನ್ನು ಎಳೆದು ತರುವುದು ಸರಿಯಲ್ಲ. ಮಾಧ್ಯಮಗಳು ಈ ಸುದ್ದಿ ಮೂಲಗಳು ತಿಳಿಸಿದೆ ಎಂದು ಪ್ರಸಾರ ಮಾಡುತ್ತಿದೆ. ಆ ಮೂಲ ಯಾವುದು ಎಂದು ತಿಳಿಸಬೇಕು. ಈ ಬಗ್ಗೆ ಈಗಾಗಲೆ ದ.ಕ ಜಿಲ್ಲಾ ಎಸ್ಪಿ ಕೂಡ ಸ್ಪಷ್ಟನೆ ನೀಡಿದ್ದಾರೆ. ರವೂಫ್ ನನಗೆ ಮೊದಲಿನಿಂದಲೂ ಪರಿಚಯವಿರುವ ವ್ಯಕ್ತಿ. ಅವರು ಅಂತವರಲ್ಲ, ಆದರೆ ಮಾಧ್ಯಮಗಳು ಈ ರೀತಿ ಸುದ್ದಿ ಪ್ರಸಾರ ಮಾಡಿದ್ದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇಂತಹ ವಿಚಾರದಲ್ಲಿ ಜಿಲ್ಲಾಧಿಕಾರಿ, ಕಮೀಷನರ್ ಮತ್ತು ಎಸ್ಪಿಯವರು ಹೇಳಿದ್ದು ಅಂತಿಮವಾಗಬೇಕು. ಆದ್ದರಿಂದ ಹೊಸ ಸರಕಾರದ ಗೃಹ ಮಂತ್ರಿಯಾದರೂ ಈ ಬಗ್ಗೆ ಹೇಳಿಕೆ ನೀಡಲಿ ಎಂದು ಹೇಳಿದರು.