ಮಂಗಳೂರು:ಮಹಾನಗರ ಪಾಲಿಕೆಯ 21ನೇ ಅವಧಿಗೆ ಮಹಾಪೌರರಾಗಿ ದಿವಾಕರ ಪಾಂಡೇಶ್ವರ ಹಾಗೂ ಉಪ ಮೇಯರ್ ಆಗಿ ವೇದಾವತಿ ಅಲಿಯಾಸ್ ಜಾನಕಿ ಆಯ್ಕೆಯಾಗಿದ್ದಾರೆ.
ಮಂಗಳೂರು ಪಾಲಿಕೆ ಮೇಯರ್ ಆಗಿ ದಿವಾಕರ ಪಾಂಡೇಶ್ವರ, ಉಪ ಮೇಯರ್ ಆಗಿ ವೇದಾವತಿ(ಜಾನಕಿ) ಆಯ್ಕೆಯಾಗಿದ್ದಾರೆ. ಪಾಂಡೇಶ್ವರ ಸತತ ಮೂರು ಬಾರಿ ಕಂಟೋನ್ಮೆಂಟ್ ವಾರ್ಡ್ನಿಂದ ಮಹಾನಗರ ಪಾಲಿಕೆ ಸದಸ್ಯರಾಗಿದ್ದಾರೆ. ಸದ್ಯ ಬಿಜೆಪಿ ಬೆಂಬಲಿತರು ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ.ಯಶವಂತ್ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ. ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಉಪ ಜಿಲ್ಲಾಧಿಕಾರಿ, ರೂಪಾ, ಅಪರ ಪ್ರಾದೇಶಿಕ ಆಯುಕ್ತರು ಉಪಸ್ಥಿತರಿದ್ದರು.
ಮೀಸಲಾತಿ ಆಧಾರದಲ್ಲಿ ಹಿಂದುಳಿದ ವರ್ಗ (ಎ)ದ ಪುರುಷ ಅಭ್ಯರ್ಥಿಗಳು ಮೇಯರ್ ಹಾಗೂ ಸಾಮಾನ್ಯ ಮಹಿಳೆ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಮೂಲಕ ವೇದಾವತಿ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮಹಾನಗರ ಪಾಲಿಕೆಯ 44 ಬಿಜೆಪಿ ಸದಸ್ಯರು, 14 ಕಾಂಗ್ರೆಸ್ ಸದಸ್ಯರು, 2 ಎಸ್ಡಿಪಿಐ ಸದಸ್ಯರು ಹಾಗೂ ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ ಚಲಾಯಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ನ ಕೇಶವ ಮರೋಳಿ 15 ಮತಗಳು ಪಡೆದರು. ಬಿಜೆಪಿಯ ದಿವಾಕರ ಪಾಂಡೇಶ್ವರ 46 ಮತ ಗಳಿಸಿದರು. ಎಸ್.ಡಿ.ಪಿ.ಐನ ಇಬ್ಬರು ಅಭ್ಯರ್ಥಿಗಳು ತಟಸ್ಥರಾಗುವ ಮೂಲಕ ಯಾರಿಗೂ ಮತ ಚಲಾಯಿಸಿಲ್ಲ.
ಈ ಮೂಲಕ ದಿವಾಕರ ಪಾಂಡೇಶ್ವರ 31 ಮತಗಳ ಅಂತರದಿಂದ ಜಯಗಳಿಸಿ, ಮಹಾನಗರ ಪಾಲಿಕೆ 21ನೇ ಅವಧಿಗೆ ಮೇಯರ್ ಆಗಿ ಆಯ್ಕೆಯಾದರು.ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ಜೀನತ್ ಸಂಶುದ್ದೀನ್ ಹಾಗೂ ಬಿಜೆಪಿಯ ವೇದಾವತಿ ಯಾನೇ ಜಾನಕಿ ಸ್ಪರ್ಧಾ ಕಣದಲ್ಲಿದ್ದು, ಝೀನತ್ ಸಂಶುದ್ದೀನ್ 17 ಅವರು ಮತಗಳನ್ನು ಪಡೆದಿದ್ದು, ವೇದಾವತಿ ಯಾನೆ ಜಾನಕಿ 46 ಮತಗಳನ್ನು ಪಡೆದಿದ್ದಾರೆ.
ಇನ್ನು ಇದೇ ಸಂದರ್ಭ 60 ವಾರ್ಡ್ನ ಮ.ನ.ಪಾ ಸದಸ್ಯರ ಪದಗ್ರಹಣ ನಡೆಯಿತು. ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು. ಮೇಯರ್ ಹಾಗೂ ಉಪ ಮೇಯರ್ ಆಗಿ ಆಯ್ಕೆಯಾದ ದಿವಾಕರ ಪಾಂಡೇಶ್ವರ ಹಾಗೂ ವೇದಾವತಿ ಯಾನೆ ಜಾನಕಿಯವರಿಗೆ ಪುಷ್ಪ ಗುಚ್ಚ ನೀಡಿ ಗೌರವಿಸಲಾಯಿತು. ಈ ಸಂದರ್ಭ ಇಬ್ಬರಿಗೂ ಮಂಗಳೂರು ಮ.ನ.ಪಾ ಆಯುಕ್ತರು ಪ್ರಮಾಣ ವಚನ ಬೋಧಿಸಿದರು.