ಮಂಗಳೂರು: ಸಮಾಜವನ್ನು ಕಟ್ಟಿ ಬೆಳೆಸುವ, ದಾರಿದೀಪವಾಗುವ, ಕುಟುಂಬವನ್ನು ನಿರ್ವಹಣೆ ಮಾಡಬೇಕಾದರೆ ಮಹಿಳಾ ಶಕ್ತಿ ಅತ್ಯಂತ ಯೋಜನಾಬದ್ಧವಾಗಿ ಕೆಲಸ ಮಾಡಬೇಕು. ಪ್ರತೀ ಮನೆಗಳು, ಕುಟುಂಬಗಳು ತನ್ನದೇ ಆದ ಚೌಕಟ್ಟಿನಲ್ಲಿ, ಶಕ್ತಿಯುತವಾಗಿ ಬೆಳೆಯಬೇಕಾದರೆ ಮಹಿಳೆಯರು ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದ.ಕ.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಸಹಯೋಗದೊಂದಿಗೆ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಜಿಲ್ಲಾಮಟ್ಟದ ಸ್ತ್ರೀಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದಷ್ಟು ಯೋಜನೆಗಳನ್ನು ಮಹಿಳಾ ಸಬಲೀಕರಣ, ಜಾಗೃತಿಗೋಸ್ಕರ ಜಾರಿಗೆ ತರಬೇಕಾಗಿದೆ. ಕೇಂದ್ರ ಸರಕಾರದ ಭೇಟಿ ಬಜಾವೋ, ಭೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆಗಳನ್ನು ರಾಜ್ಯ ಸರಕಾರವೂ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.