ಕರ್ನಾಟಕ

karnataka

ETV Bharat / state

ಗ್ರಾಮೀಣ ಜನರ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿ ತಂಡ ಭೇಟಿ: ಡಿಸಿ ಮುಲ್ಲೈ ಮುಗಿಲನ್ - ಅರಣ್ಯ ಹಾಗೂ ಕಂದಾಯ ಭೂಮಿ

ಜಿಲ್ಲಾಡಳಿತದ ತಂಡ ನಿಗದಿತ ತಾಲೂಕಿಗೆ ತೆರಳಿ, ಅಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಡಿಸಿ ಮುಲ್ಲೈ ಮುಗಿಲನ್
ಡಿಸಿ ಮುಲ್ಲೈ ಮುಗಿಲನ್

By

Published : Aug 2, 2023, 8:41 PM IST

ಮಂಗಳೂರು :ಕಂದಾಯ ಸೇರಿದಂತೆ ಜನರ ಸಮಸ್ಯೆ ನಿವಾರಣೆಗೆ ಗ್ರಾಮಾಂತರ ಪ್ರದೇಶಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಜನರ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ, ಜಿಲ್ಲಾಧಿಕಾರಿಗಳ ತಂಡ ಒಂದೊಂದು ತಾಲೂಕುಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರಿಂದ ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಅರಿತುಕೊಂಡ ಬಳಿಕ ಅವರು ಈ ವಿಷಯ ತಿಳಿಸಿದರು.

ಮುಂದಿನ ವಾರದಿಂದ ಈ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಾರದಲ್ಲಿ ಒಂದು ದಿನವನ್ನು ಅದಕ್ಕಾಗಿ ನಿಗದಿಪಡಿಸಲಾಗುತ್ತದೆ. ಆ ದಿನ ಆರಂಭದಲ್ಲಿ ಜಿಲ್ಲಾಡಳಿತದ ತಂಡ ನಿಗದಿತ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿದೆ. ಬಳಿಕ ತಾನೂ ಕೂಡಾ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಲಿದ್ದೇನೆ. ಜನರನ್ನು ತಾಲೂಕು ಮಟ್ಟದಲ್ಲಿಯೇ ಭೇಟಿಯಾಗಿ ಸಮಸ್ಯೆ ಇತ್ಯರ್ಥಪಡಿಸುವುದು ಇದರ ಉದ್ದೇಶವಾಗಿದೆ. ಬಳಿಕ ಹೋಬಳಿ ಮಟ್ಟದಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಂಗಳೂರು ಪ್ರೆಸ್‌ಕ್ಲಬ್‌

ಶೀಘ್ರ ಸಾರಿಗೆ ಪ್ರಾಧಿಕಾರದ ಸಭೆ : ಜಿಲ್ಲೆಯಲ್ಲಿ ಸರ್ಕಾರಿ ಬಸ್​ಗಳ ಓಡಾಟಕ್ಕಿರುವ ಸಮಸ್ಯೆ, ಎಲೆಕ್ಟ್ರಿಕ್ ಆಟೋರಿಕ್ಷಾಗಳು ಸೇರಿದಂತೆ ಸಾರಿಗೆ ಸಂಬಂಧಿಸಿತ ಸಮಸ್ಯೆಗಳ ಬಗ್ಗೆ ಶೀಘ್ರವೇ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆಯನ್ನು ನಡೆಸುವುದಾಗಿ ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿನ ಹೊಂಡ ಗುಂಡಿಗಳು, ಒಳಚರಂಡಿ ಅವ್ಯವಸ್ಥೆ ಮೊದಲಾದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಮನಪಾ ಅಧಿಕಾರಿಗಳ ಜತೆ ಜಂಟಿ ಪರಿಶೀಲನಾ ಸಭೆ ನಡೆಸಿ ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದರು.

ಮಂಗಳೂರು ತಾಲೂಕು ಸೇರಿದಂತೆ ಜಿಲ್ಲೆಯ ಗ್ರಾಮಾಂತರ ತಾಲೂಕುಗಳಲ್ಲಿನ ಜಟಿಲ ಸಮಸ್ಯೆಯಾಗಿರುವ ಕಂದಾಯ ಅರಣ್ಯ ಭೂಮಿಯ ವರ್ಗೀಕರಣಕ್ಕೆ ಸಂಬಂಧಿಸಿದ ಸರ್ವೆ ಕೇವಲ ಜಿಲ್ಲೆಯನ್ನು ಸೀಮಿತವಾಗಿ ನಡೆಸಲು ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು. ಇದೇ ವೇಳೆ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜಿಪಿಎಸ್ ಆಧಾರದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಗುರುತಿಸುವಿಕೆಯನ್ನು ವಿಶೇಷ ಅಧ್ಯಯನ ಹಾಗೂ ವಿಶೇಷ ತಂಡದ ಮೂಲಕ ನಡೆಸಲು ಪ್ರಯತ್ನಿಸಲಾಗುವುದು ಎಂದು ಮುಲ್ಲೈ ಮುಗಿಲನ್ ತಿಳಿಸಿದರು.

ಸಾರ್ವಜನಿಕರಿಗೆ ಸಂಬಂಧಪಟ್ಟವರು ಲಭ್ಯ: ಗ್ರಾಮೀಣ ಭಾಗಗಳಲ್ಲಿ ತಾಲೂಕು ಆಸ್ಪತ್ರೆ, ತಾಲೂಕು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ನಿಗದಿತ ದಿನಗಳಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟವರು ಲಭ್ಯ ಇರುವಂತೆ ಹಾಗೂ ಈ ಮಾಹಿತಿ ಕಚೇರಿಗಳಲ್ಲಿಯೂ ಲಭ್ಯವಾಗುವಂತೆ ಕ್ರಮ ವಹಿಸಲಾಗುವುದು ಎಂದರು.

ಮಾಧ್ಯಮ ಸಂವಾದದ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರವಿರಾಜ್ ಹೆಚ್. ಜಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ. ಬಿ ಹರೀಶ್ ರೈ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ. ಎನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಇದನ್ನೂ ಓದಿ:ಉಳ್ಳಾಲ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ.. ಮುಖ್ಯಮಂತ್ರಿ ಸಿದ್ದರಾಮಯ್ಯ

ABOUT THE AUTHOR

...view details