ಕಾರವಾರ :ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದಾಗಿ ವ್ಯಾಪಕ ಮಳೆಯ ಜೊತೆಗೆ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಉತ್ತರಕನ್ನಡದಲ್ಲಿ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಿದ ಕಾರಣ ನೂರಾರು ಬೋಟ್ಗಳು ದಡದಲ್ಲಿಯೇ ಲಂಗರು ಹಾಕುವಂತಾಗಿದೆ.
ಸಮುದ್ರದಲ್ಲಿ ಅಲೆಗಳ ಅಬ್ಬರ : ದಡದಲ್ಲೇ ನಿಂತಿರುವ ಬೋಟ್ಗಳು ಹವಾಮಾನ ವೈಪರೀತ್ಯದಿಂದಾಗಿ ಈಗಾಗಲೇ ವ್ಯಾಪಾಕ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಕೂಡ ಜೋರಾಗಿದೆ. ಇದೇ ಕಾರಣಕ್ಕೆ ಉತ್ತರಕನ್ನಡ ಜಿಲ್ಲಾಡಳಿತ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದವರಿಗೆ ತಕ್ಷಣ ಹತ್ತಿರದ ಬಂದರು ಪ್ರದೇಶಗಳಲ್ಲಿ ರಕ್ಷಣೆ ಪಡೆಯುವಂತೆ ಸೂಚನೆ ನೀಡಲಾಗಿತ್ತು.
ಕಳೆದ ಮೂರು ದಿನಗಳಿಂದ ಜಿಲ್ಲೆಯ ಕಾರವಾರದಿಂದ ಭಟ್ಕಳದವರೆಗಿನ ಬಂದರುಗಳಿಗೆ ನೂರಾರು ಬೋಟ್ ಗಳು ಬಂದು ನಿಲ್ಲುತ್ತಿವೆ. ಕಾರವಾರದ ಬೈತಖೋಲ್ ಬಂದರಿನಲ್ಲಿಯೂ ಜಿಲ್ಲೆ ಮಾತ್ರವಲ್ಲದೆ ಮಂಗಳೂರು, ಉಡುಪಿ, ಹೊರ ರಾಜ್ಯದ ಗೋವಾ, ಮಹಾರಾಷ್ಟ್ರ, ತಮಿಳುನಾಡಿನ ಬೋಟ್ಗಳು ಬರುತ್ತಿವೆ.
ಆಳ ಸಮುದ್ರದ ಮೀನುಗಾರಿಕೆ ಜತೆಗೆ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಸಹ ಬಂದ್ ಮಾಡಲಾಗಿದೆ. ನಾಡದೋಣಿಗಳನ್ನ ಸಮುದ್ರ ತೀರದಲ್ಲಿಡಲಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದೆ. ಸೆ.15ರ ತನಕ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಸ್ಟ್ ಗಾರ್ಡ್ ಬೋಟ್ಗಳು ಸಮುದ್ರದಲ್ಲಿ ಗಸ್ತು ತಿರುಗಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಎಚ್ಚರಿಕೆ ನೀಡುತ್ತಿವೆ.
ಓದಿ: ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಮೋದಿ ಸೇರಿ ಗಣ್ಯರ ಕಂಬನಿ