ದಕ್ಷಿಣ ಕನ್ನಡ : ಸುರತ್ಕಲ್ ರಾಷ್ಟ್ರ ಭಕ್ತ ನಾಗರಿಕ ವೇದಿಕೆಯಿಂದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾರ್ಗಿಲ್ ವಿಜಯೋತ್ಸವ, ಸೈನಿಕ ಕಲ್ಯಾಣ ನಿಧಿ ಹಸ್ತಾಂತರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಜಿಲ್ಲಾ ನಿವೃತ್ತ ಸೈನಿಕರ ಸಂಘ ಅಧ್ಯಕ್ಷ ಸಿ ಪಿ ಒ ವಿಕ್ರಮ್ ದತ್ತಾ, ಭಾರತ ದೇಶದಲ್ಲಿ ನೆಮ್ಮದಿ ಸ್ವತಂತ್ರವಾಗಿ ಮುಕ್ತವಾಗಿರಲು ಸಾಧ್ಯವಾಗಿದೆ ಎಂದರೆ, ಅದಕ್ಕೆ ಕಾರಣ ಗಡಿಯಲ್ಲಿ ಕಾಯುವ ವೀರ ಯೋಧರು. ಅವರ ಪರಾಕ್ರಮ, ಧೈರ್ಯಗಳಿಂದ ಶತ್ರು ಸೇನೆ ಹಿಮ್ಮೆಟ್ಟಿಸಲು ಸಾಧ್ಯವಾಗಿದೆ. ಇಡೀ ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ. ಸೈನಿಕರಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರ ನಮ್ಮ ಭಾರತ ದೇಶವಾಗಿದೆ ಎಂದರು.
ಯೋಧರ ಕುಟುಂಬಕ್ಕೆ ಸೈನಿಕ ಕಲ್ಯಾಣ ನಿಧಿ ವಿತರಣೆ ಮುಖ್ಯ ಅತಿಥಿಯಾಗಿ ಮಾತನಾಡಿದ ರಮಾನಂದ ಭಟ್, ದೇಶದಲ್ಲಿ ಸೈನಿಕರ ಬಲಿದಾನಗಳನ್ನು ಸ್ಮರಿಸುವ ಕೆಲಸ ಸದಾ ಆಗಬೇಕು. ಯುವ ಜನಾಂಗವು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಾಯ್ನಾಡಿನ ಸೇವೆ ಮಾಡುವಲ್ಲಿ ಮುಂದೆ ಬರಬೇಕು ಎಂದು ಆಶಿಸಿದರು.
ಯುದ್ಧದಲ್ಲಿ ವೀರಮರಣಹೊಂದಿದ ಸುಮಾರು 11 ವೀರಯೋಧರ ಕುಟುಂಬದವರಿಗೆ ಸೈನಿಕ ಕಲ್ಯಾಣ ನಿಧಿ ವತಿಯಿಂದ 25,000 ರೂ. ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಹಾಗೂ ಮಾಜಿ ಸೈನಿಕರುಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸುರತ್ಕಲ್ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ಗೌರವಾಧ್ಯಕ್ಷ ಕಡಂಬೋಡಿ ಮಹಾಬಲ ಪೂಜಾರಿ, ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಗೌರವ ಸಲಹೆಗಾರ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಮಹೇಶ್ ಮೂರ್ತಿ ಸುರತ್ಕಲ್ ಮತ್ತಿತ್ತರರು ಇದ್ದರು.