ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ರಥ ಬೀದಿಯಲ್ಲಿದ್ದ, ಎರಡು ಬೃಹತ್ ಗಾತ್ರದ ಅಶ್ವತ್ಥ ಮರಗಳನ್ನು ಸ್ಥಳಾಂತರ ಮಾಡಲಾಯಿತು. ರಸ್ತೆ ಅಗಲೀಕರಣ ಕಾಮಗಾರಿ ನಡೆಯುವುದರಿಂದ ಮರಗಳನ್ನು ಬುಡ ಸಮೇತ, ವೃಕ್ಷ ಪ್ರೇಮಿ ಜೀತ್ ಮಿಲನ್ ರೋಚ್ ನೇತೃತ್ವದಲ್ಲಿ ಸ್ಥಳಾಂತರಿಸಲಾಯಿತು.
ಮರವನ್ನು 24 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ, ಬೃಹತ್ ಗಾತ್ರದ ಟ್ರಕ್ನಲ್ಲಿ ಸಿತ್ಲ ಬೈಲ್ ಎಂಬಲ್ಲಿಗೆ ಸ್ಥಳಾಂತರ ಮಾಡಲಾಯಿತು. ಸುರಕ್ಷತೆಯ ದೃಷ್ಟಿಯಿಂದ ರಸ್ತೆಯಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಎರಡು ಮರಗಳಲ್ಲಿ ಒಂದು 65 ಟನ್ ಭಾರ ಹೊಂದಿದ್ದರೆ, ಮತ್ತೊಂದು 55 ಟನ್ ಭಾರ ಹೊಂದಿದೆ.
ರಥ ಬೀದಿಯಲ್ಲಿದ್ದ ಮರಗಳ ಸ್ಥಳಾಂತರ ಸಿತ್ಲ ಬೈಲ್ನಲ್ಲಿ ನೆಡಲಾಗಿರುವ ಈ ಎರಡೂ ಅಶ್ವತ್ಥ ಮರಗಳು, ಪೂರ್ತಿಯಾಗಿ ಮೊದಲಿನಂತಾಗಲು ಒಂದು ವರ್ಷ ಕಾಲವಾದರೂ ಬೇಕಾಗುತ್ತದೆ. ಸುಮಾರು ಆರು ತಿಂಗಳಲ್ಲಿ ಎಲೆಗಳು ಚಿಗುರೊಡೆಯುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ನಡೆಯಬೇಕಾದರೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ಬಳಿಕ ಮರಗಳಿಗೆ ನೀರು ಹಾಕುವುದು ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಜೀತ್ ಮಿಲನ್ ರೋಚ್, ಇದೇ ರೀತಿ ಸುಮಾರು 25ಕ್ಕೂ ಅಧಿಕ ಮರಗಳನ್ನು ಯಶಸ್ವಿ ಸ್ಥಳಾಂತರ ಕಾರ್ಯವನ್ನು ಮಾಡಿದ್ದು, ಅದರಲ್ಲಿ ಬೃಹತ್ ಗಾತ್ರದ 3 ಅಶ್ವತ್ಥ ಮರ ಹಾಗೂ 1 ಆಲದ ಮರವೂ ಸೇರಿದೆ. ಸ್ಥಳಾಂತರ ಕಾರ್ಯಕ್ಕೆ ದೇವಳದ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾರ್ಗದರ್ಶನ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪರಿಶೀಲನೆ ನಡೆಸಿದ್ದಾರೆ.