ಮಂಗಳೂರು : ಯಾರೂ ಯಾವುದೇ ಹೇಳಿಕೆಗಳನ್ನು ನೀಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಎಲ್ಲರೂ ಕೆಲಸ ಮಾಡಬೇಕು. ಯಾರಾದರೂ ಹೇಳಿಕೆ ಕೊಟ್ಟರೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕತ್ವದ ಬಗ್ಗೆ ಪಕ್ಷದೊಳಗೆ ಅಪಸ್ವರ ವಿಚಾರದ ಬಗ್ಗೆ ಇಂದು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯದಲ್ಲಿ ಸೋತ ಬಳಿಕ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೂ ಗಲಾಟೆಗಳು ಆಗಿಲ್ಲ. ಎಲ್ಲ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ. ಆದರೂ ಕೆಲವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಿನ್ನೆಯೇ ಈ ಬಗ್ಗೆ ಎಲ್ಲ ಹಿರಿಯರಲ್ಲಿ ಮಾತನಾಡಿದ್ದೇನೆ. ಇವತ್ತಿನಿಂದ ಯಾರೂ ಯಾವ ಹೇಳಿಕೆಗಳನ್ನು ಕೊಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಹೇಳಿಕೆ ಕೊಟ್ಟವರಿಗೆ ನೋಟಿಸ್ ನೀಡುವ ಕೆಲಸ ಮಾಡಿದ್ದೇನೆ ಎಂದರು.
ಮಾತಿನ ಮೇಲೆ ಹಿಡಿತವಿರಲಿ. ಹೇಳಿಕೆ ಕೊಡುವ ಎಲ್ಲರಿಗೂ ನೋಟಿಸ್ ನೀಡಲಾಗುತ್ತದೆ. ಮತ್ತೆ ಪಾರ್ಟಿ ಕಟ್ಟಿ ಲೋಕಸಭಾ ಚುನಾವಣೆಗಾಗಿ ಕೆಲಸ ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವುದೇ ಗುರಿಯಾಗಬೇಕು. ಈಗಾಗಲೇ ಬೂತ್ ಗಟ್ಟಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಕಾರ್ಯಕರ್ತರೊಡನೆ ಸಂವಾದ ಮಾಡಿದ್ದಾರೆ. ನಮ್ಮ ಜವಾಬ್ದಾರಿ ಜಾಸ್ತಿ ಇದೆ. ಕಾರ್ಯಕರ್ತರು ಬಹಳ ಉತ್ಸಾಹ ಮತ್ತು ಪ್ರೇರಣೆಯಿಂದ ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ನಾಯಕರು ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಮಾತಾಡಬೇಕು ಎಂದು ಹೇಳಿದರು.