ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ ಡಿಜಿ - ಐಜಿಪಿ ಪ್ರವೀಣ್ ಸೂದ್ ಅವರು ಭಾನುವಾರ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಈ ಭೇಟಿಯೂ ಇದೀಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ವರದಾನವಾಗಿ ಪರಿಣಮಿಸಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಸಾಧ್ಯತೆ ಐಜಿಪಿಯವರ ಕುಕ್ಕೆ ಸುಬ್ರಹ್ಮಣ್ಯ ಭೇಟಿ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ಪೊಲೀಸ್ ಠಾಣಾ ಕಟ್ಟಡದ ಬೇಡಿಕೆ ಇಟ್ಟಿದ್ದರು.
ಇಲ್ಲಿನ ಪೊಲೀಸ್ ಠಾಣೆಯ ಸಣ್ಣ ಕಟ್ಟಡವನ್ನು ಖುದ್ದು ಐಜಿಪಿ ಪ್ರವೀಣ್ ಸೂದ್ ಅವರೇ ಕಣ್ಣಾರೆ ನೋಡಿದ್ದರು, ಮಾತ್ರವಲ್ಲದೇ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದಲೂ ಈ ಮೊದಲು ನೂತನ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣದ ಪ್ರಸ್ತಾವನೆಯನ್ನೂ ಇಲಾಖೆಗೆ ಕಳುಹಿಸಲಾಗಿತ್ತು.
ಇದೀಗ ಇವೆಲ್ಲದರ ಎಫೆಕ್ಟ್ ಎಂಬಂತೇ ರಾಜ್ಯದಲ್ಲಿ ಬರಲಿರುವ 100 ಹೊಸ ಪೊಲೀಸ್ ಠಾಣೆಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡವನ್ನೂ ಪರಿಗಣಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಅವರು ಕೆಎಸ್‌ಪಿಎಚ್‌ಸಿಗೆ ನಿರ್ದೇಶನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.