ಕರ್ನಾಟಕ

karnataka

ETV Bharat / state

'ಡಿಜಿಟಲ್ ಬಸ್'.. ಸರ್ಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ರಾಜ್ಯದಲ್ಲೇ ಪ್ರಥಮ ಪ್ರಯೋಗ - ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು

ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ "ಕ್ಲಾಸ್ ಆನ್ ವ್ಹೀಲ್ಸ್" ಎಂಬ ಹೆಸರಲ್ಲಿ ಹವಾನಿಯಂತ್ರಿತ ಬಸ್​ನ್ನು ಸಿದ್ಧಪಡಿಸಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ.

Class on Wheels Digital Bus
ಕ್ಲಾಸ್ ಆನ್ ವ್ಹೀಲ್ಸ್​ ಡಿಜಿಟಲ್​ ಬಸ್​

By ETV Bharat Karnataka Team

Published : Nov 18, 2023, 1:23 PM IST

Updated : Nov 18, 2023, 8:53 PM IST

ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಡಿಜಿಟಲ್ ಬಸ್

ಮಂಗಳೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ದೃಷ್ಟಿಯಿಂದ‌ ಮಂಗಳೂರಿನ ಎಂ ಫ್ರೆಂಡ್ಸ್ ಸಂಸ್ಥೆ ಹೊಸ ಯೋಜನೆ ಆರಂಭಿಸಿದೆ. ಹೌದು, ಗ್ರಾಮೀಣ ಭಾಗದ ಶಾಲೆಗಳಿಗೆ ಹೋಗಿ ಅವರಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಈ ಡಿಜಿಟಲ್ ಬಸ್ ಆರಂಭಿಸಲಾಗಿದೆ.

ಮಂಗಳೂರಿನ ಎಂ ಫ್ರೆಂಡ್ಸ್ ಎಂಬುದು ವಾಟ್ಸಪ್ ಗ್ರೂಪ್ ಮೂಲಕ 2013 ರಲ್ಲಿ ಆರಂಭವಾದ ಸಂಘಟನೆ. ಈ ಸಂಘಟನೆ ಆರೋಗ್ಯ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆ ನೀಡುತ್ತಿದೆ. ಇದೀಗ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆಗಿರುವ ಈ ಸಂಸ್ಥೆ ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಲೋಕಾರ್ಪಣೆಗೊಳಿಸಿದೆ.

ಕಂಪ್ಯೂಟರ್ ಶಿಕ್ಷಣಕ್ಕೆ ಡಿಜಿಟಲ್ ಬಸ್

"ಕ್ಲಾಸ್ ಆನ್ ವ್ಹೀಲ್ಸ್" ಎಂಬ ಹೆಸರಲ್ಲಿ ಐಷಾರಾಮಿ ಹವಾನಿಯಂತ್ರಿತ ಬಸ್ ತಯಾರಿಸಲಾಗಿದ್ದು, ಇನ್ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉಚಿತ ಸೇವೆಯೊಂದಿಗೆ ಕಾರ್ಯಾಚರಿಸಲಿದೆ. ವಾರ್ಷಿಕ ಐದು ಸಾವಿರ ಮಕ್ಕಳಿಗೆ ಕಂಪ್ಯೂಟರ್​ನ ಶಿಕ್ಷಣ ನೀಡುವ ಗುರಿಯನ್ನು ಡಿಜಿಟಲ್ ಬಸ್ ಹೊಂದಿದೆ.

ಬಸ್​ನಲ್ಲಿದೆ ಹೈಟೆಕ್​ ಸೌಕರ್ಯ :ಡಿಜಿಟಲ್ ಬಸ್​ನ್ನು ಸಂಪೂರ್ಣ ಕ್ಲಾಸ್​ರೂಮ್ ಆಗಿ ಪರಿವರ್ತಿಸಲಾಗಿದೆ. ತರಗತಿಯೊಳಗೆ ಒಂದು ಟನ್ನಿನ ಎರಡು ಎ.ಸಿ. ಅಳವಡಿಸಲಾಗಿದೆ. ಏಕಕಾಲದಲ್ಲಿ 16 ವಿದ್ಯಾರ್ಥಿಗಳು ಕಲಿಯಲು 16 ಲ್ಯಾಪ್ ಟಾಪ್ ಕಂಪ್ಯೂಟರ್, ಕೀಪ್ಯಾಡ್, ಮೌಸ್, ಚಾರ್ಜರ್ಸ್, ಕೂರಲು 16 ರಿವೋಲ್ವಿಂಗ್ ಚೇರ್ಸ್, 16 ಮಡಚುವ ಡೆಸ್ಕ್ ಇವೆ. ಹಾಗೆ ಶಿಕ್ಷಕರಿಗೆ ಪ್ರತ್ಯೇಕ ಕಂಪ್ಯೂಟರ್, ಚೇರ್, ಡೆಸ್ಕ್ ನಿರ್ಮಿಸಲಾಗಿದೆ. ಕಾನ್ಫರೆನ್ಸ್​​ಗೆ ಪ್ರಾಜೆಕ್ಟರ್, ಪ್ರೆಸೆಂಟೇಶನ್​ಗೆ ಟಿ.ವಿ, ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆ, ಮೈಕ್ ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಎಲ್ಇಡಿ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ.

ಡಿಜಿಟಲ್ ಬಸ್ ಒಳಗೆ ಕಂಪ್ಯೂಟರ್​ ವ್ಯವಸ್ಥೆ

ಹಾಜರಾತಿಗೆ ಬಯೋಮೆಟ್ರಿಕ್​ ವ್ಯವಸ್ಥೆ : ಅಂತರ್ಜಾಲದ ವಿದ್ಯೆಗಾಗಿ ವೈಫೈ, ಇಂಟರ್ನೆಟ್​ನ್ನೂ ಬಸ್​ ಒಳಗೊಂಡಿದೆ. ಅವಶ್ಯಕತೆಗಾಗಿ ಕಲರ್ ಪ್ರಿಂಟರ್, ಫೋಟೋ ಕಾಪಿ ಮತ್ತು ಸ್ಕ್ಯಾನರ್ ಇದೆ. ವಿದ್ಯಾರ್ಥಿಗಳ, ಶಿಕ್ಷಕರ ಹಾಜರಾತಿಗೆ ಬಸ್ ಬಾಗಿಲ ಬಳಿ ಅತ್ಯಾಧುನಿಕ ಬಯೋಮೆಟ್ರಿಕ್ ಡಿವೈಸ್ ಸ್ಥಾಪಿಸಲಾಗಿದೆ. ಇತರ ಸಮಯಗಳಲ್ಲಿ 25 ಜನರ ಸಭೆ ಸಮಾರಂಭಗಳನ್ನು ಬಸ್​ನೊಳಗೆ ಎಲ್ಲಿ ಬೇಕಾದರೂ ಮಾಡುವಂತಹ ಮಲ್ಟಿಸ್ಪೆಶಾಲಿಟಿ ವ್ಯವಸ್ಥೆ ಇದೆ. ತರಗತಿ ಒಳ ಹೋಗಲು ಮೂರು ಪ್ರವೇಶ ದ್ವಾರಗಳಿವೆ. ಮಕ್ಕಳ ಸುರಕ್ಷತೆಗಾಗಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ.

ಸ್ವಂತ ವಿದ್ಯುತ್ ಸಂಚಲನಕ್ಕಾಗಿ 6.8 ಕೆ.ವಿ.ಯ ಅತ್ಯಾಧುನಿಕ ಜನರೇಟರ್, ಹೊರಗಿನ ವಿದ್ಯುತ್ ಸಂಪರ್ಕದ ಸೌಲಭ್ಯದ ಪಾಯಿಂಟ್, ಕೈ ಮುಖ ತೊಳೆಯಲು ಬಸ್ ಟಾಪಲ್ಲಿ 200 ಲೀಟರಿನ ನೀರಿನ ಟ್ಯಾಂಕ್, ವಾಶ್ ಬೇಸಿನ್, 40 ಲೀಟರಿನ ಕುಡಿಯುವ ನೀರಿನ ಸೌಲಭ್ಯ, ಎರಡು ಎಸಿ ಔಟ್ ಡೋರ್ ಯೂನಿಟ್, ಬ್ಯಾಟರಿ ಬಾಕ್ಸ್, ಟೂಲ್ ಬಾಕ್ಸ್, ಪವರ್ ಪಾಯಿಂಟ್ ಮೊದಲಾದವನ್ನು ಬಸ್ ಹೊಂದಿದೆ.

ಎಲ್ಇಡಿ ಡಿಜಿಟಲ್ ಬೋರ್ಡ್

ಡಿಜಿಟಲ್​ ಬಸ್​ ಆರಂಭವಾಗಿದ್ದು ಹೀಗೆ : ಎಂ ಫ್ರೆಂಡ್ಸ್ ಸಂಸ್ಥೆಯ ಹನೀಫ್ ಪುತ್ತೂರು ಅವರು ಸದ್ಯ ದುಬೈಯ ಮಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯದಲ್ಲಿ ಕ್ಲೌಡ್​ ಆ್ಯಂಡ್ ಇನ್ಫ್ರಾ ಸ್ಟ್ರೆಕ್ಚರ್ ಮೆನೇಜರ್ ಆಗಿ ಉದ್ಯೋಗದಲ್ಲಿದ್ದು, ಯುಎಇ ಗೋಲ್ಡನ್ ವೀಸಾ ಹೊಂದಿದ್ದಾರೆ. ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್’ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಯುಎಇಯ ಅಬುದಾಬಿಯಲ್ಲಿನ ಸಂಸ್ಥೆಯೊಂದು ಹಮ್ಮಿಕೊಂಡಿರುವ ಸ್ಪರ್ಧೆಯಲ್ಲಿ ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮೊಬೈಲ್ ಬಸ್​ನ್ನು ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟರು.

ಲಕ್ಷಾಂತರ ರೂ. ವೆಚ್ಚ : ಈ ಯೋಜನೆಯನ್ನು ಮೆಚ್ಚಿ ಲಕ್ಷಾಂತರ ಜನರು ಆನ್ಲೈನ್ ವೋಟ್ ಮಾಡುವ ಮೂಲಕ ಅವರನ್ನು ವಿಜೇತರನ್ನಾಗಿಸಿದ್ದರು. ಅದರಲ್ಲಿ ದೊರೆತ ಬಹುಮಾನದ ಮೊತ್ತಕ್ಕೆ ತಮ್ಮಿಂದಾಗುವ ಹಣವನ್ನು ಸೇರಿಸಿ ತಾನು ಸೇವೆಗೈಯ್ಯುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್​ಗೆ ಆ ಮೊತ್ತ ಹಸ್ತಾಂತರಿಸಿ ಬಸ್ ಕನಸನ್ನು ಸಾಕ್ಷಾತ್ಕರಿಸಿದರು. ಬಸ್​ಗೆ ಒಟ್ಟು 60 ಲಕ್ಷ ರೂ. ಖರ್ಚು ಆಗಿದ್ದು, ಹೆಚ್ಚುವರಿ ಮೊತ್ತವನ್ನು ಎಂ.ಫ್ರೆಂಡ್ಸ್ ಟ್ರಸ್ಟ್ ಭರಿಸಿದೆ. ಅರವಿಂದ್ ಮೋಟಾರ್ಸ್​ನ ಟಾಟಾ ಕಂಪೆನಿಯ ಹೀರಾ ಮಾಡೆಲಿನ ಈ ಬಸ್​ನ್ನು ಕಂಪ್ಯೂಟರ್ ಕ್ಲಾಸ್ ರೂಮ್ ಆಗಿ ಸುಸಜ್ಜಿತವಾಗಿ ಬೈಕಂಪಾಡಿಯ ರೋಡ್ರಿಕ್ಸ್ ಇಂಡಸ್ಟ್ರೀಸ್​ನವರು ಪರಿವರ್ತಿಸಿದ್ದಾರೆ.

ಬಸ್​ನಲ್ಲಿ ಎಸಿ ವ್ಯವಸ್ಥೆ

15 ರಿಂದ 20 ತಾಸುಗಳ ತರಬೇತಿ :ಈ ಬಸ್ ಜಿಲ್ಲೆಯ ಗ್ರಾಮೀಣ ವಿದ್ಯಾಸಂಸ್ಥೆಗಳಿಗೆ ತೆರಳಿ ಶಾಲಾ ಆವರಣದಲ್ಲೇ ಕಂಪ್ಯೂಟರ್ ಶಿಕ್ಷಣ ನೀಡಲಿದೆ. ಒಂದು ವಿದ್ಯಾರ್ಥಿಗೆ ಕನಿಷ್ಠ 15 ರಿಂದ 20 ತಾಸುಗಳ ತರಬೇತಿಯನ್ನು ಹಂತ ಹಂತವಾಗಿ ಕೊಡಲಿದೆ. ಒಂದು ದಿನದಲ್ಲಿ ನಾಲ್ಕು ಶಾಲೆಗಳಿಗೆ ತೆರಳಿ ತಲಾ ಒಂದರಿಂದ ಒಂದೂವರೆ ತಾಸಿನ ತರಗತಿಯನ್ನು ಬಿತ್ತರಿಸಲಿದೆ. ಇದಕ್ಕಾಗಿಯೇ ಪ್ರತ್ಯೇಕ ಸಿಲೆಬಸ್ ಕೂಡ ರಚಿಸಲಾಗಿದೆ. ಬಸ್​ನಲ್ಲಿ ಇಬ್ಬರು ಕಂಪ್ಯೂಟರ್ ಶಿಕ್ಷಕಿಯರು, ಅನುಭವಿ ಚಾಲಕ ಮತ್ತು ನಿರ್ವಾಹಕರು ಇರುತ್ತಾರೆ. ಸರ್ಕಾರಿ ರಜೆ ಹೊರತುಪಡಿಸಿ ಬೆಳಗ್ಗೆ 9 ರಿಂದ ಸಂಜೆ 4 ರ ತನಕ ಡಿಜಿಟಲ್​ ಬಸ್ ಕಾರ್ಯಾಚರಿಸಲಿದೆ. ಈ ಯೋಜನೆಗೆ ವಾರ್ಷಿಕ 10 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ.

ಸಂಸ್ಥೆ ಅಧ್ಯಕ್ಷರ ಮಾತು :ಈ ಬಗ್ಗೆ ಮಾತನಾಡಿದ ಎಂ ಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ "ವಾಟ್ಸಪ್ ಗ್ರೂಪ್ ಮೂಲಕ ಆರಂಭವಾದ ಈ ಸಂಸ್ಥೆಯಿಂದ ಹಲವು ಸಾಮಾಜಿಕ ಸೇವೆ ನಡೆಸುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಪೈಪೋಟಿ ನೀಡಬೇಕು ಎಂಬ ದೃಷ್ಟಿಯಿಂದ ಈ ಯೋಜನೆ ಮಾಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ಆರಂಭಿಸಿದ್ದೇವೆ. ಬಿಇಒ ಮೂಲಕ ಮಾತನಾಡಿ ಈಗಾಗಲೇ 15 ಶಾಲೆಗಳನ್ನು ಗುರುತಿಸಿದ್ದೇವೆ" ಎಂದರು.

ಬಿಇಓ ಪ್ರತಿಕ್ರಿಯೆ:ಈ‌ ಬಗ್ಗೆ ಮಾತನಾಡಿದ ಪುತ್ತೂರು ತಾಲೂಕಿನ ಬಿಇಓ ಲೋಕೇಶ್ ಅವರಿಗೆ ನಾನು 10 ಶಾಲೆಗಳಲ್ಲಿ ಇದನ್ನು ಮಾಡಲು ಹೇಳಿದ್ದೇನೆ. 10 ಶಾಲೆಗಳ ಬಳಿ ಹೋಗಿ ಇದು ನಿಲ್ಲುತ್ತದೆ. 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಅನುಕೂಲವಾಗಿದೆ. ಈ ಬಸ್​ನಲ್ಲಿ 16 ಮಕ್ಕಳು ಕಲಿಯಬಹುದು. ಅವರಿಗೆ 15 ವರೆಗೆ ತರಗತಿ ಸಿಗಲಿದೆ. ಬಸ್ ಶಾಲೆಯ ಬಳಿ ನಿಂತುಕೊಂಡಿರಲಿದೆ. ಬಸ್ ನಲ್ಲಿ ತರಗತಿ ನಡೆಯಲಿದೆ. ಇದನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಾಣ; ಒಲಿಂಪಿಕ್​ಗೂ ಇಲ್ಲಿ ಸಿಗುತ್ತೆ ತರಬೇತಿ

Last Updated : Nov 18, 2023, 8:53 PM IST

ABOUT THE AUTHOR

...view details