ಮಂಗಳೂರು:ರಾಜ್ಯದಲ್ಲಿ ಹತ್ಯೆಗಳ ಸರಣಿ ನಡೆದ ಬಳಿಕ ಯುಪಿ ಮಾಡೆಲ್ ತರಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ. ಹಾಗಾದರೆ ಬೊಮ್ಮಾಯಿ ಮಾಡೆಲ್ ವಿಫಲವಾಯ್ತು ಎಂದು ಒಪ್ಪಿಕೊಂಡಿದ್ದಾರಾ? ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಯುಪಿ ಮಾಡೆಲ್ ತರುತ್ತೇವೆ ಅಂದರೆ ಕರ್ನಾಟಕ ಮಾಡೆಲ್ ವಿಫಲವಾಗಿದೆ ಎಂದು ಅರ್ಥ. ಇತರ ರಾಜ್ಯಗಳಿಗೆ ಕರ್ನಾಟಕ ಮಾಡೆಲ್ ಆಗಬೇಕು. ನಾರಾಯಣಗುರುಗಳ, ಬಸವಣ್ಣನವರ ತತ್ತ್ವಗಳನ್ನು ಅಳವಡಿಸಿ, ಅಂಬೇಡ್ಕರ್ ಅವರು ಬರೆದ ಸಂವಿಧಾನ ದಂತೆ ಆಡಳಿತ ನಡೆಸಲಿ. ಮೊದಲು ಗುಜರಾತ್ ಮಾಡೆಲ್ ಅನ್ನುತ್ತಿದ್ದರು. ಈಗ ಗುಜರಾತ್ ಮಾಡೆಲ್ ಸುದ್ದಿ ಇಲ್ಲ. ಈಗ ಯುಪಿ ಮಾಡೆಲ್ ಅನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಳೆದ ಹತ್ತು ದಿನಗಳಿಂದ ದ.ಕ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಯಲ್ಲಿ ಮೂರು ಯುವಕರು ಸಮಾಜಘಾತುಕ ಶಕ್ತಿಗಳಿಂದ ಹತ್ಯೆ ಆಗಿದ್ದಾರೆ. ಸಮಾಜಘಾತುಕ ಶಕ್ತಿಯಿಂದ ಹತ್ಯೆಯಾದ ಈ ಮೂರು ಕೊಲೆಗಳನ್ನೂ ಖಂಡಿಸುತ್ತೇನೆ. ಈ ಸರಣಿ ಕೊಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಮೂರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖೆ ನಡೆಸಬೇಕು. ನೈಜ ಆರೋಪಿಗಳು ಯಾರೇ ಇರಲಿ, ಸಂಘಟನೆ ಇರಲಿ ಪೊಲೀಸ್ ಇಲಾಖೆ ಮಟ್ಟ ಹಾಕಬೇಕು. ರಾಜಕೀಯಕ್ಕಾಗಿ ನಿರಪರಾಧಿಗಳಿಗೆ ತೊಂದರೆ ಆಗಬಾರದು ಎಂದರು.