ದಕ್ಷಿಣಕನ್ನಡ/ಧರ್ಮಸ್ಥಳ:ಸ್ವಚ್ಛತೆಗೆ ಶ್ರೀ ಧರ್ಮಸ್ಥಳ ಕ್ಷೇತ್ರ ನೀಡುವ ಕಾಳಜಿ ದೇಶದ ಜನತೆಗೆ ಮಾದರಿಯಾಗಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿವಿ ಸದಾನಂದ ಗೌಡ ಬಣ್ಣಿಸಿದ್ದಾರೆ.
ಸ್ವಚ್ಛತೆಯ ಬಗ್ಗೆ ಧರ್ಮಸ್ಥಳ ದೇವಳ ನೀಡುವ ಕಾಳಜಿ ದೇಶಕ್ಕೆ ಮಾದರಿ... ಡಿವಿಎಸ್ ಬಣ್ಣನೆ - ದಕ್ಷಿಣಕನ್ನಡ ಸುದ್ದಿ
ಧರ್ಮಸ್ಥಳ ಅಮೃತ ವರ್ಷಿಣಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವಿಸ್ತೃತ ಕಟ್ಟಡ ಧರ್ಮಶ್ರೀ ಉದ್ಘಾಟನಾ ಸಮಾರಂಭ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನದ ಅಂಗವಾಗಿ 20,000 ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳ ವಿತರಣಾ ಸಮಾರಂಭ ಹಾಗೂ ಧರ್ಮಸ್ಥಳ ವಲಯದ ಒಕ್ಕೂಟ ಪದಗ್ರಹಣ ಸಮಾರಂಭ ನಡೆಯಿತು.
ಧರ್ಮಸ್ಥಳ ಅಮೃತ ವರ್ಷಿಣಿ ಸಭಾಭವನದಲ್ಲಿಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವಿಸ್ತೃತ ಕಟ್ಟಡ ಧರ್ಮಶ್ರೀ ಇದರ ಉದ್ಘಾಟನಾ ಸಮಾರಂಭ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನದ ಅಂಗವಾಗಿ 20,000 ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳ ವಿತರಣಾ ಸಮಾರಂಭ ಹಾಗೂ ಧರ್ಮಸ್ಥಳ ವಲಯದ ಒಕ್ಕೂಟ ಪದಗ್ರಹಣ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಿವಿಎಸ್, ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಕಾರ್ಯಕ್ರಮ ಬರೀ ಕಾರ್ಯಕ್ರಮವಾಗದೇ ಅದೊಂದು ಆಂದೋಲನವಾಗಬೇಕು. ಅದು ಸಾಮಾನ್ಯ ಮನುಷ್ಯನ ದಿನನಿತ್ಯದ ಭಾಗವಾಗಬೇಕು. ಸ್ವಚ್ಛತೆಗೆ ಧರ್ಮಸ್ಥಳ ಕ್ಷೇತ್ರ ನೀಡುವ ಕಾಳಜಿ ದೇಶದ ಜನತೆಗೆ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ವಹಿಸಿದ್ದರು. ನೂತನ ಕಚೇರಿ ಉದ್ಘಾಟನೆಯನ್ನ ಸಚಿವ ಡಿವಿಎಸ್ ನೆರವೇರಿಸಿದರು. ತ್ಯಾಜ್ಯ ಸಂಗ್ರಹಣಾ ಬುಟ್ಟಿಗಳ ವಿತರಣೆಯನ್ನು ಮುಜರಾಯಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿದರು. ಜನಮಂಗಳ ಕಾರ್ಯಕ್ರಮ ಸಲಕರಣೆಗಳ ವಿತರಣೆಯನ್ನು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ನೆರವೇರಿಸಿದರು.