ಕರ್ನಾಟಕ

karnataka

ETV Bharat / state

ಧರ್ಮಸ್ಥಳಕ್ಕೆ ಪಾದಯಾತ್ರೆ: 10,000ಕ್ಕೂ ಹೆಚ್ಚು ಭಕ್ತರ ಆಗಮನ; ಅಭಿನಂದಿಸಿದ ವೀರೇಂದ್ರ ಹೆಗ್ಗಡೆ

ಲಕ್ಷದೀಪೋತ್ಸವದ ಹಿನ್ನೆಲೆ ಶುಕ್ರವಾರ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಯಿತು.

Dharamasthala Padayatra
ಧರ್ಮಸ್ಥಳಕ್ಕೆ ಪಾದಯಾತ್ರೆ

By ETV Bharat Karnataka Team

Published : Dec 9, 2023, 1:06 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಹೃದಯ ಪರಿವರ್ತನೆಯಿಂದ ಅದ್ಭುತ ಪ್ರಗತಿ ಸಾಧ್ಯ. ಎಲ್ಲರನ್ನೂ ಜಯಿಸಿ ಸರ್ವರ ಪ್ರೀತಿ - ವಿಶ್ವಾಸಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಲಕ್ಷದೀಪೋತ್ಸವದ ಹಿನ್ನೆಲೆ ಶುಕ್ರವಾರ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರನ್ನು ಅಭಿನಂದಿಸಿ ಮಾತನಾಡಿದರು.

ಧರ್ಮಸ್ಥಳಕ್ಕೆ ಪಾದಯಾತ್ರೆ - ಭಕ್ತರನ್ನು ಅಭಿನಂದಿಸಿದ ವೀರೇಂದ್ರ ಹೆಗ್ಗಡೆ

ನಾವು ಎಲ್ಲರಲ್ಲಿಯೂ ಒಳ್ಳೆಯತನ ಕಾಣಬೇಕು. ದೋಷ ಹುಡುಕಬಾರದು. ಯಾವಾಗಲೂ ಕೆಟ್ಟ ಯೋಚನೆ ಮಾಡದೇ ಸದಾಶಯದೊಂದಿಗೆ ಸತ್ಕಾರ್ಯಗಳನ್ನೇ ಮಾಡಿದರೆ ಲೋಕ ಕಲ್ಯಾಣವಾಗುತ್ತದೆ. ಎಲ್ಲರಲ್ಲಿಯೂ ಪರಸ್ಪರ ಪ್ರೀತಿ - ವಿಶ್ವಾಸ, ನಂಬಿಕೆ ಮತ್ತು ಗೌರವ ಬೆಳೆಯುತ್ತದೆ. ದೇವರು ನನಗೆ ಕೊಟ್ಟ ಎಲ್ಲ ಅವಕಾಶಗಳನ್ನು ಮತ್ತು ಸಂಪತ್ತನ್ನು ಬಳಸಿ ಸತ್ಕಾರ್ಯಗಳನ್ನೇ ಮಾಡಿದ್ದೇನೆ. ಅಗಾಧ ಸಂಪತ್ತಿಗಿಂತ ಸತ್ಕಾರ್ಯಕ್ಕೆ ಮೌಲ್ಯ ಜಾಸ್ತಿ. ಎಲ್ಲರೂ ಸೇರಿ ಜೊತೆಯಾಗಿ ಸತ್ಕಾರ್ಯಗಳನ್ನೇ ಮಾಡೋಣ ಎಂದು ತಿಳಿಸಿದರು.

ಧರ್ಮಸ್ಥಳಕ್ಕೆ ಪಾದಯಾತ್ರೆ - ಭಕ್ತರನ್ನು ಅಭಿನಂದಿಸಿದ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದ ಬಗ್ಗೆ ಯಾವುದೇ ಅನುಮಾನ, ಸಂಶಯ ಬೇಡ. ನೇರವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ಇನ್ನೂ, ಸಂಸದರ ನಿಧಿಯಿಂದ ತನಗೆ ಮಂಜೂರಾದ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಗೆ ನೀಡಿದ್ದು, ಅಲ್ಲಿ ಇದರಿಂದಾಗಿ ಕ್ಷೀರ ಕ್ರಾಂತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪಾದಯಾತ್ರೆ ಮೂಲಕ ಎಲ್ಲರೂ ನಿಮ್ಮ ಪ್ರೀತಿ-ವಿಶ್ವಾಸ, ಗೌರವ, ಭಕ್ತಿ ಮತ್ತು ಸಂತೋಷ ವ್ಯಕ್ತಪಡಿಸಿರುವಿರಿ. ಇದರಿಂದ ನನ್ನಲ್ಲಿ ತೃಪ್ತಿ, ಸಂತೋಷ ಮತ್ತು ಧನ್ಯತಾಭಾವ ಮೂಡಿದೆ ಎಂದರು.

ಪಾದಯಾತ್ರಿಗಳ ಭೀಷ್ಮ ಪ್ರತಿಜ್ಞೆ: ಪಾದಯಾತ್ರಿಗಳೆಲ್ಲ ಸಂಘಟನೆ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗಾಗಿ ತಾವೆಲ್ಲರೂ ಧರ್ಮಸ್ಥಳದ ಜೊತೆ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಸದಾ ಇದ್ದೇವೆ ಎಂದು ಸಾಮೂಹಿಕವಾಗಿ ದೃಢಸಂಕಲ್ಪದೊಂದಿಗೆ ಭೀಷ್ಮ ಪ್ರತಿಜ್ಞೆ ಮಾಡಿದರು.

ಧರ್ಮಸ್ಥಳ ಲಕ್ಷದೀಪೋತ್ಸವ ಕಾರ್ಯಕ್ರಮಗಳು

ಹೇಮಾವತಿ ವಿ ಹೆಗ್ಗಡೆಯವರು, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಸೋನಿಯವರ್ಮ, ಪೂರನ್‌ ವರ್ಮ, ಶರತ್‌ಕೃಷ್ಣ ಪಡ್ವೆಟ್ನಾಯ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್ ಸತೀಶ್ಚಂದ್ರ, ಎಸ್.ಡಿ.ಎಮ್ ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಹೆಚ್​ ಮಂಜುನಾಥ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್ ಜನಾರ್ದನ್, ಎಸ್.ಡಿ.ಎಮ್ ಆಸ್ಪತ್ರೆಯ ನಿರ್ದೇಶಕ ಎಮ್. ಜನಾರ್ದನ, ಸಿ.ಒ.ಒ. ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಧರ್ಮಸ್ಥಳ ಲಕ್ಷದೀಪೋತ್ಸವ ಕಾರ್ಯಕ್ರಮಗಳು

ರಾಜ್ಯಮಟ್ಟದ ವಸ್ತುಪ್ರದರ್ಶನ:ಲಕ್ಷದೀಪೋತ್ಸವ ಸಂದರ್ಭ ಆಯೋಜಿಸಲಾಗಿರುವ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶನಂದನ್ ಎಮ್ ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ ಆಶೀರ್ವದಿಸಿದರು. ಶ್ರದ್ಧಾ ಅಮಿತ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವಸ್ತುಪ್ರದರ್ಶನದಲ್ಲಿ ನೋಡಲು, ತಿಳಿಯಲು ಮತ್ತು ಜ್ಞಾನ ಕ್ಷಿತಿಜವನ್ನು ವಿಸ್ತರಿಸಲು ಸಾಕಷ್ಟು ಅವಕಾಶಗಳಿವೆ. ಜೊತೆಗೆ ಮನೋರಂಜನೆಯೂ ಇದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಹೆಗ್ಗಡೆಯವರು ಸಲಹೆ ನೀಡಿದರು.

ಇದನ್ನೂ ಓದಿ:ತಂದೆ ಸ್ಮರಣಾರ್ಥ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 1 ವರ್ಷದವರೆಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿದ ಮಗ

ಬ್ಯಾಂಕ್‌ಗಳು, ಜೀವವಿಮೆ, ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಸೆಲ್ಕೋ ಸೋಲಾರ್, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಪುಸ್ತಕದ ಮಳಿಗೆಗಳು, ರುಡ್‌ಸೆಟ್ ಬಜಾರ್, ಮಿಲೆಟ್ ಸೇರಿದಂತೆ 200ಕ್ಕೂ ಹೆಚ್ಚಿನ ಮಳಿಗೆಗಳಿವೆ. ಸಿರಿಧಾನ್ಯಗಳ ಬಳಕೆಯಿಂದ ಪೌಷ್ಠಿಕ ಆಹಾರ ತಯಾರಿಸಲಾಗುತ್ತಿದೆ. ಅಲ್ಲಿಗೂ ಭೇಟಿ ನೀಡಿ ಎಲ್ಲರೂ ಮನೆಯಲ್ಲಿ ಸಿರಿಧಾನ್ಯಗಳ ಆಹಾರ ಬಳಸಿ ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.

ಇದನ್ನೂ ಓದಿ:'ಅನಿಮಲ್​' ಅಬ್ಬರ: 'ಗೀತಾಂಜಲಿ' ಪಾತ್ರ ವರ್ಣಿಸಿದ ರಶ್ಮಿಕಾ ಮಂದಣ್ಣ

ರಾತ್ರಿ ಗಂಟೆ 10.30ರ ವರೆಗೆ ವಸ್ತುಪ್ರದರ್ಶನ ವೀಕ್ಷಿಸಲು ಉಚಿತ ಅವಕಾಶವಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ದೇವಸ್ಥಾನ, ಬೀಡು, ಪ್ರವೇಶದ್ವಾರ, ವಸತಿಗೃಹಗಳು, ಮಂಜೂಷಾ ವಸ್ತುಸಂಗ್ರಹಾಲಯ ಹಾಗೂ ವಿವಿಧ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ABOUT THE AUTHOR

...view details