ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಧನೇಶ್ ಶೆಟ್ಟಿ ಈಗ ಇಂಡೋನೇಶ್ಯಾ ಕ್ರಿಕೆಟ್ ತಂಡದಲ್ಲಿ ಆಲ್‌ರೌಂಡರ್ ಆಗಿದ್ದು, ಮೊದಲ ಪಂದ್ಯವನ್ನೂ ಆ ದೇಶದ ಪರ ಆಡಿದ್ದಾರೆ. ಇಂಜಿನಿಯರ್ ಆಗಿರುವ ಧನೇಶ್, ಇಂಡೋನೇಶ್ಯಾದಲ್ಲಿ ಉದ್ಯೋಗಿ. ಮೊದಲೇ ಕ್ರಿಕೆಟ್ನತ್ತ ಆಸಕ್ತರಾಗಿದ್ದ ಕಾರಣ ತಂಡದಲ್ಲಿ ಸೇರ್ಪಡೆ ಹೊಂದುವುದು ಇವರಿಗೆ ಸಹಕಾರಿಯಾಗಿದೆ. ಇಂಡೋನೇಶ್ಯಾ ದೇಶವು ಕ್ರಿಕೆಟ್ಗೆ ವ್ಯಾಪಕ ಉತ್ತೇಜನ ನೀಡುತ್ತಿದ್ದು, ಭಾರತೀಯರೂ ಈ ತಂಡದಲ್ಲಿ ಸೇರ್ಪಡೆ ಹೊಂದಿದ್ದಾರೆ. ತಮಿಳುನಾಡು, ಮಹಾರಾಷ್ಟ್ರದ ಇಬ್ಬರು ಈ ತಂಡದಲ್ಲಿದ್ದಾರೆ.
ಬಂಟ್ವಾಳದ ಕುಕ್ಕಿಪ್ಪಾಡಿಯ ಪ್ರಗತಿಪರ ಕೃಷಿಕ ಮಹಾಬಲ ಶೆಟ್ಟಿ ಮತ್ತು ಪುಷ್ಪಾ ದಂಪತಿಯ ಮೂವರು ಪುತ್ರರಲ್ಲಿ ಒಬ್ಬರಾಗಿರುವ ಧನೇಶ್, ಬಾಲ್ಯದಲ್ಲೇ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡವರು. ಸಿದ್ಧಕಟ್ಟೆಯ ಸಂತ ಬಾರ್ತಲೋಮಿಯಾ ಪ್ರಾಥಮಿಕ ಶಾಲೆ, ವಾಮದಪದವಿನ ಸರಕಾರಿ ಹೈಸ್ಕೂಲು, ಬಂಟ್ವಾಳ ಎಸ್.ವಿ.ಎಸ್. ಪದವಿಪೂರ್ವ ಕಾಲೇಜುವರೆಗೆ ಪ್ರಾಥಮಿಕ ಹಂತದಿಂದ ಪಿಯುಸಿವರೆಗಿನ ಓದುವ ಸಂದರ್ಭದಲ್ಲಿ ಇವರಿಗೆ ಕ್ರಿಕೆಟ್ ಆಟ ಪಂಚಪ್ರಾಣವಾಗಿತ್ತು. ಇದೇ ಆಸಕ್ತಿ ಇದೀಗ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದವರೆಗೂ ಕರೆದುಕೊಂಡು ಬಂದಿದೆ.
ಬೆಂಗಳೂರಿನಿಂದ ಇಂಡೋನೇಶ್ಯಾಕ್ಕೆ..:ಪಿಯುಸಿ ವ್ಯಾಸಂಗದ ಬಳಿಕ ಮೂಡುಬಿದಿರೆಯ ಎಸ್.ಎನ್.ಎಂ. ಪಾಲಿಟೆಕ್ನಿಕ್ನಲ್ಲಿ ಡಿಪ್ಲೊಮಾ ಮಾಡಿ, ದೂರ ಶಿಕ್ಷಣದ ಮೂಲಕ ಎಂಜಿನಿಯರಿಂಗ್ ಪದವಿ ಪಡೆದ ಧನೇಶ್, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದ್ಯೋಗಿಯಾಗಿದ್ದರು. ಆ ಸಂದರ್ಭ ಮಾರ್ತಹಳ್ಳಿಯಲ್ಲಿ ಎಸಿಸಿ ಕ್ರಿಕೆಟ್ ಕ್ಲಬ್ನ ಖಾಕಾಯಂ ಸದಸ್ಯರಾಗಿದ್ದರು.