ಬೆಳ್ತಂಗಡಿ(ದಕ್ಷಿಣ ಕನ್ನಡ): ಮಹಾಶಿವರಾತ್ರಿಯನ್ನು ನಾಡಿನೆಲ್ಲೆಡೆ ವಿಶೇಷ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶಿವನ ದೇವಾಲಯಗಳಲ್ಲಿ ಪಾರಾಯಣ ಜಾಗರಣೆ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಅದೇ ರೀತಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶಿವರಾತ್ರಿಗೆ ವಿಶೇಷ ಪೂಜೆಗಳು ಜರುಗುತ್ತವೆ. ಶಿವರಾತ್ರಿ ಸಂದರ್ಭ ರಾಜ್ಯದ ವಿವಿಧ ಕಡೆಗಳಿಂದ ಪಾದಯಾತ್ರೆಯ ಮೂಲಕ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಹರಿದು ಬರುತ್ತಿದ್ದಾರೆ.
ರಾಜ್ಯದ ನಾನಾ ಮೂಲೆಗಳಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಸಹಸ್ರ-ಸಹಸ್ರ ಸಂಖ್ಯೆಯ ಭಕ್ತರು ತಮ್ಮ ಈ ಬಾರಿಯ ಪಾದಯಾತ್ರೆಯನ್ನು ಪೂರ್ಣಗೊಳಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗಲು ಕಾತರರಾಗಿದ್ದಾರೆ.
ಭಾನುವಾರ, ಸೋಮವಾರದಂದು ಚಾರ್ಮಾಡಿ ಕಡೆಯಿಂದ ಹೆಚ್ಚಿನ ಪಾದಯಾತ್ರಿಗಳು ಆಗಮಿಸಿದರು. ಹಗಲಲ್ಲಿ ಒಂದಿಷ್ಟು ಬಿಸಿಲಿನ ತಾಪ ಅಧಿಕ ಇರುವ ಕಾರಣ ಸಂಜೆ, ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಅತೀ ಹೆಚ್ಚಿನ ಪಾದಯಾತ್ರಿಗಳು ರಸ್ತೆಯುದ್ದಕ್ಕೂ ಕಂಡುಬಂದರು.
ಪಾದಯಾತ್ರಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅವರಿಗೆ ಸೇವೆ ನೀಡಲು ರಸ್ತೆಯ ಬದಿಗಳಲ್ಲಿ ಅಲ್ಲಲ್ಲಿ ಸ್ಥಳೀಯರು, ಸಂಘ -ಸಂಸ್ಥೆಗಳು ಸೇರಿ ಪಾನೀಯ, ಫಲಹಾರ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದಾರೆ. ಶರಬತ್ತು, ಮೊಸರನ್ನ, ರಾಗಿ ಗಂಜಿ, ನೀರು, ಮಜ್ಜಿಗೆ, ಪಾನಕ, ಬೆಲ್ಲ ಇತ್ಯಾದಿಗಳನ್ನು ಪಾದಯಾತ್ರಿಗಳಿಗೆ ನೀಡುವಲ್ಲಿ ಮುತುವರ್ಜಿ ವಹಿಸಲಾಗಿದೆ.
ಚಾರ್ಮಾಡಿ ಮೂಲಕ ಬರುವ ಭಕ್ತರು ಚಾರ್ಮಾಡಿ, ಮುಂಡಾಜೆ, ಕಲ್ಮಂಜ ಪ್ರದೇಶದಲ್ಲಿ ಹರಿಯುವ ನೇತ್ರಾವತಿ, ಮೃತ್ಯುಂಜಯ ನದಿಗಳಲ್ಲಿ ಮಿಂದು ಮುಂದುವರೆಯುತ್ತಿದ್ದಾರೆ.
5 ವರ್ಷದಿಂದ ಅನ್ನದಾನ..ಚಾರ್ಮಾಡಿ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ಘಟಕ, ಭಕ್ತಾದಿಗಳು ಸೇರಿ ಪಾದಯಾತ್ರಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈ ಸೇವೆಯು ನಿರಂತರ ಐದು ವರ್ಷಗಳಿಂದ ನಡೆದು ಬರುತ್ತಿದ್ದು, ಸ್ಥಳೀಯ ಸ್ವಯಂ ಸೇವಕರು ಇದರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.