ಕರ್ನಾಟಕ

karnataka

ETV Bharat / state

ಕೋಡಿಂಬಾಳ, ಕಾಣಿಯೂರು, ಎಡಮಂಗಲ ರೈಲ್ವೆ ನಿಲ್ದಾಣ ಅಭಿವೃದ್ಧಿ: ರೈಲ್ವೆ ಇಲಾಖೆ - Development of Edamangala railway station

2023-24ರಲ್ಲಿ ಮಂಗಳೂರು-ಹಾಸನ ರೈಲು ಮಾರ್ಗದ ಕೋಡಿಂಬಾಳ, ಕಾಣಿಯೂರು ಮತ್ತು ಎಡಮಂಗಲ ರೈಲ್ವೇ ನಿಲ್ದಾಣಗಳ ಅಭಿವೃದ್ಧಿಗೆ ರೈಲ್ವೇ ಇಲಾಖೆ ಮುಂದಾಗಿದೆ.

development-of-kodimbala-kaniyur-edamangala-railway-station-in-2023-24
2023-24ನೇ ಸಾಲಿನಲ್ಲಿ ಕೋಡಿಂಬಾಳ, ಕಾಣಿಯೂರು, ಎಡಮಂಗಲ ರೈಲ್ವೆ ನಿಲ್ದಾಣ ಅಭಿವೃದ್ಧಿ : ರೈಲ್ವೆ ಇಲಾಖೆ

By

Published : Mar 29, 2023, 9:04 AM IST

ಸುಳ್ಯ (ದಕ್ಷಿಣ ಕನ್ನಡ) : ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕು ಕೇಂದ್ರದಿಂದ ಮೂರು ಕಿ.ಮೀ ದೂರದಲ್ಲಿರುವ ಪ್ರಮುಖ ಕೋಡಿಂಬಾಳ ರೈಲ್ವೆ ನಿಲ್ದಾಣ ಸೇರಿದಂತೆ ಕೆಲವು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ರೈಲ್ವೇ ಇಲಾಖೆ ಮುಂದಾಗಿದೆ. 2023-24ರ ಸಾಲಿನಲ್ಲಿ ಕಡಬ ತಾಲೂಕಿನ ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ನಂ. 1ರಲ್ಲಿ 450 ಮೀಟರ್‌ಗಳ ಉನ್ನತ ಮಟ್ಟದ ಫ್ಲಾಟ್‌ಫಾರ್ಮ್ ಹಾಗೂ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಮಾಹಿತಿ ಹಕ್ಕುಗಳ ಕಾಯಿದೆಯಡಿಯಲ್ಲಿ ಕಾರ್ಯಕರ್ತರೋರ್ವರು ಕೇಳಿದ ಪ್ರಶ್ನೆಗೆ ರೈಲ್ವೆ ಇಲಾಖೆ ಉತ್ತರಿಸಿದೆ.

2023-24ರಲ್ಲಿ ಮಂಗಳೂರು-ಹಾಸನ ರೈಲು ಮಾರ್ಗದಲ್ಲಿರುವ ಕೋಡಿಂಬಾಳದಲ್ಲಿ ಮಾತ್ರವಲ್ಲದೆ ಕಾಣಿಯೂರಿನಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ 450 ಮೀಟರ್ ಉದ್ದದ ಫ್ಲಾಟ್‌ಫಾರ್ಮ್‌ ಮತ್ತು ಎಡಮಂಗಲ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ -1 ರಲ್ಲಿ 560 ಮೀಟರ್‌ ಉದ್ದದ ಉನ್ನತ ಮಟ್ಟದ ಪ್ಲಾಟ್‌ಫಾರ್ಮ್, ಆಸನ ವ್ಯವಸ್ಥೆಗಳು, ನೀರಿನ ವ್ಯವಸ್ಥೆ, 60 ಚದರ ಮೀಟರ್ ಪ್ಲಾಟ್‌ಫಾರ್ಮ್ ಶೆಲ್ಟರ್ ಮತ್ತು ಬೆಳಕಿನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದೆ.

ಕಡಬ ತಾಲೂಕಿನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ದಿನನಿತ್ಯ ಮಂಗಳೂರು, ಬೆಂಗಳೂರು ಸೇರಿದಂತೆ ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳುವ ಅದೆಷ್ಟೋ ಜನರು ಕೋಡಿಂಬಾಳ ರೈಲು ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಈಗಾಗಲೇ ನೂರಾರು ಜನ ಇದರ ಪ್ರಯೋಜನ ಪಡೆಯುವವರಿದ್ದಾರೆ. ಇಲ್ಲಿಂದ ಪವಿತ್ರ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಪುಣ್ಯ ಪ್ರವಾಸಿ ತಾಣಗಳಿಗೆ ನೂರಾರು ಭಕ್ತರು ದೂರದೂರುಗಳಿಂದ ಬಂದು ಹೋಗುತ್ತಿದ್ದಾರೆ. ಹೀಗಿದ್ದರೂ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರಿಗೆ ಅನುಕೂಲಕರವಾದ ಸೌಲಭ್ಯಗಳು ಸಿಗುತ್ತಿಲ್ಲ.

1976-77ರಲ್ಲಿ ಮಂಗಳೂರು-ಹಾಸನ-ಬೆಂಗಳೂರು ರೈಲು ಹಳಿ ನಿರ್ಮಾಣವಾದ ಎರಡು ಮೂರು ವರ್ಷಗಳಲ್ಲೇ ಕೋಡಿಂಬಾಳದಲ್ಲಿ ರೈಲು ನಿಲ್ದಾಣ ನಿರ್ಮಾಣಗೊಂಡಿತ್ತು. ಸುಮಾರು ಎಂಟು ವರ್ಷಗಳ ಕಾಲ ಇಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ರಾತ್ರಿ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ಸ್ಟೇಷನ್‌ನಲ್ಲಿ ತಂಗುತ್ತಿದ್ದ ರೈಲು ಬೆಳಗ್ಗೆ 7.30 ಗಂಟೆಗೆ ಕೋಡಿಂಬಾಳ ಮೂಲಕ ಹೊರಟು, ಪುತ್ತೂರು, ಮಂಗಳೂರು ಹೋಗಿ ಮಧ್ಯಾಹ್ನ ವೇಳೆಗೆ ಮತ್ತೆ ಆಗಮಿಸಿ ನಂತರ ಸಂಜೆ ನೆಟ್ಟಣಕ್ಕೆ ಮತ್ತೆ ವಾಪಸಾಗುತ್ತಿತ್ತು.

ಬೆಳಗ್ಗೆ ಮಂಗಳೂರಿಗೆ ಹೋಗಿ ಸಂಜೆ ಮನೆಗೆ ಬರುವ ನೂರಾರು ಕಾರ್ಮಿಕರಿಗೆ, ಕೇರಳ ಕಡೆಗೆ ಹೋಗುವವರಿಗೆ ಇದು ಹೆಚ್ಚಿನ ಅನುಕೂಲ ಆಗುತ್ತಿತ್ತು. ಈ ಮಧ್ಯೆ ಎಕ್ಸ್‌ಪ್ರೆಸ್‌ ರೈಲು ಕೂಡಾ ನಿಲುಗಡೆಯಾಗುತ್ತಿತ್ತು. ಮೀಟರ್‌ಗೇಜ್‌ ಬದಲು ಬ್ರಾಡ್‌ ಗೇಜ್‌ಗೆ ಹಳಿ ಪರಿವರ್ತನೆಯಾದ ನಂತರ ಕೋಡಿಂಬಾಳದ ರೈಲು ನಿಲ್ದಾಣ ಅಭಿವೃದ್ಧಿ ಆಗಲಿಲ್ಲ. ಲೋಕಲ್ ಒಂದು ರೈಲು ನಿಲುಗಡೆ ಬಿಟ್ಟು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ರದ್ದಾಯಿತು. ಮೀಟರ್‌ ಗೇಜ್‌ ಹಳಿ ಇರುವಾಗ ಇಲ್ಲಿ ಪ್ಲಾಟ್‌ಫಾರ್ಮ್ ಎತ್ತರದಲ್ಲಿತ್ತು. ಬ್ರಾಡ್‌ಗೇಜ್‌ ಹಳಿಯಾದಾಗ ಹಳಿ ಎತ್ತರವಾಗಿ ಪ್ಲಾಟ್‌‌ಫಾರ್ಮ್ ಹಳಿಗೆ ಸಮವಾಯಿತು. ಇದರಿಂದಾಗಿ ಮಹಿಳೆಯರು, ವೃದ್ಧರು ರೈಲಿಗೆ ಹತ್ತಿ ಇಳಿಯುವುದೇ ಒಂದು ದೊಡ್ಡ ಸಮಸ್ಯೆ ಆಯಿತು. ಈ ನಡುವೆ ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಆಗ್ರಹಿಸಿ ರೈಲು ತಡೆದು ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ರೈಲು ನಿಲುಗಡೆ ಮತ್ತು ನಿಲ್ದಾಣ ಅಭಿವೃದ್ಧಿಯ ಭರವಸೆ ನೀಡಿದ್ದರು.

ಇದನ್ನೂ ಓದಿ :ಎನ್ಐಎಯಿಂದ ಸುಳ್ಯದ ಪಿಎಫ್ಐ ಕಚೇರಿ ಜಪ್ತಿ..

ABOUT THE AUTHOR

...view details